ADVERTISEMENT

ಸಿ.ಎಂ ಭೇಟಿ ಬಳಿಕ ಅನ್ಸಾರಿ ಮುನಿಸು ಶಮನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 15:50 IST
Last Updated 2 ಏಪ್ರಿಲ್ 2024, 15:50 IST

ಗಂಗಾವತಿ: ಇಲ್ಲಿನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನ ಸೋಲಿಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕುಟುಂಬ, ರಾಜ್ಯ ಮತ್ತು ಗಂಗಾವತಿ ಕೆಲ ನಾಯಕರು ಪರೋಕ್ಷ ಕಾರಣ ಎಂದು ಆರೋಪಿಸಿ ‍ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸದಿಂದ ಚುನಾವಣೆ ಎದುರಿಸಿದ್ದ ಇಕ್ಬಾಲ್ ಅನ್ಸಾರಿ ಕೆಆರ್‌ಪಿಪಿ ಅಭ್ಯರ್ಥಿ ಜಿ.ಜನಾರ್ದನ ರೆಡ್ಡಿ (ಇಂದಿನ ಬಿಜೆಪಿ ಶಾಸಕ) ವಿರುದ್ಧ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದ್ದರು.

ರಾಜ್ಯ, ಜಿಲ್ಲೆ, ಗಂಗಾವತಿ ಕ್ಷೇತ್ರದ ಕಾಂಗ್ರೆಸ್ಸಿನ ನಾಯಕರು ಕೆಆರ್‌ಪಿಪಿ ಅಭ್ಯರ್ಥಿ ಜನಾರ್ದನರೆಡ್ಡಿಗೆ ಆಂತರಿಕವಾಗಿ ಬೆಂಬಲ ನೀಡಿ, ಚುನಾವಣೆಯಲ್ಲಿ ಮತಹಾಕಿಸಿದ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ, ಬೆಂಬಲಿಸಿದ ಕುರಿತ ಎಲ್ಲ ಫೋಟೊ, ದಾಖಲೆಗಳನ್ನು ಮುಖ್ಯಮಂತ್ರಿ ಅವರಿಗೆ ನೀಡಿ ಸೋಲಿನ ಕಾರಣಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು.

ADVERTISEMENT

ಸೋಲಿಗೆ ಸ್ಥಳೀಯ ನಾಯಕರೇ ಕಾರಣ ಎನ್ನುವುದಕ್ಕೆ ಪುಷ್ಟಿ ನೀಡುವಂತೆ ಕೊಪ್ಪಳದಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಡುವೆ ನಡೆದಿದ್ದ ‘ಅನ್ಸಾರಿಯನ್ನು ಸೋಲಿಸಿ ಬಿಟ್ಟ್ಯಾಲ್ಲೋ ರಾಘವೇಂದ್ರ’ ಎಂಬ ವಿಡಿಯೊ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದು ಅನ್ಸಾರಿ ಅವರ ಕೋಪಕ್ಕೆ ಇನ್ನಷ್ಟು ಕಾರಣವಾಗಿತ್ತು.

ಅಂದಿನಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ಸಿನ ಕಾರ್ಯಕ್ರಮ, ಸಭೆ ಹಾಜರಾಗದೇ ದೂರ ಉಳಿದಿದ್ದರು. ಸಿ.ಎಂ ಸಿದ್ದರಾಮಯ್ಯ ಹೊರತುಪಡಿಸಿ ಕಾಂಗ್ರೆಸ್ಸಿನ ಇತರೆ ಯಾವ ನಾಯಕರನ್ನು ಭೇಟಿಯಾಗಿರಲಿಲ್ಲ.

ಕೊಪ್ಪಳದ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹದ ಬಗ್ಗೆ ನಡೆದ ಸಭೆಯಲ್ಲಿ ಅನ್ಸಾರಿ ಅವರು ಶಾಸಕ ರಾಘವೇಂದ್ರ ಹಿಟ್ನಾಳ ಅವರ ತಂದೆ ಬಸವರಾಜ ಹಿಟ್ನಾಳ ಅವರ ವಿರುದ್ಧ ಕೋಪಗೊಂಡು ನಿಮ್ಮ ಮಕ್ಕಳನ್ನಷ್ಟೆ ಬೆಳೆಸೊದಲ್ಲ, ಬೇರೆಯವರ ಮಕ್ಕಳನ್ನು ಬೆಳೆಸಬೇಕು ಎಂದು ಆಕ್ರೋಶ ಹೊರಹಾಕಿದ್ದರು.

ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಅನ್ಸಾರಿ ನಿವಾಸಕ್ಕೆ ಭೇಟಿ ನೀಡಿ, ಮುನಿಸು ಶಮನಗೊಳಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಈ ನಡುವೆ ಅನ್ಸಾರಿ ಆಡಿಯೊ ಸಂದೇಶದ ಮೂಲಕ ನಾನು ಕರೆ ನೀಡುವವರೆಗೆ ಯಾವ ಕಾರ್ಯಕ್ರಮ, ಸಭೆಗೆ ತೆರಳದಂತೆ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ತಿಳಿಸಿದ್ದರು‌.

ಈಚೆಗೆ ಜಿಲ್ಲಾಉಸ್ತವಾರಿ ಸಚಿವ ಶಿವರಾಜ ತಂಗಡಿ, ಇಕ್ಬಾಲ್ ಅನ್ಸಾರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸೋಲಿಗೆ ಕಾರಣಗಳು ತಿಳಿಸಿದ್ದು, ತಪ್ಪಿತಸ್ಥರ ವಿರುದ್ಧ ಸಿ.ಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.  ಅಲ್ಲದೇ ತಾವು ಸಿಎಂ ಆಗಿ ಮುಂದುವರೆಯಲು ಲೋಕಸಭೆ ಚುನಾವಣೆಯಲ್ಲಿ ಎಲ್ಲರನ್ನು ಗೆಲ್ಲಿಸಬೇಕು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.