ಕೊಪ್ಪಳ: ಭಾರತೀಯ ಸೇನೆಗೆ ನೇಮಕಾತಿ ಮಾಡಿಕೊಳ್ಳಲು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ಕ್ಷಮತೆ ಪರೀಕ್ಷೆಯ ಪ್ರಕ್ರಿಯೆ ಶುರುವಾಗಿದ್ದು, ಯೋಧರಾಗುವ ಕನಸು ಹೊತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಸಾವಿರಾರು ಅಭ್ಯರ್ಥಿಗಳು ಮಂಗಳವಾರ ಸಾಮರ್ಥ್ಯ ಸಾಬೀತು ಮಾಡಲು ಕರಸತ್ತು ನಡೆಸಿದರು.
ಲಿಖಿತ ಪರೀಕ್ಷೆ ಬರೆದ 30 ಸಾವಿರ ಜನ ಅಭ್ಯರ್ಥಿಗಳಲ್ಲಿ 9,130 ಜನ ದೈಹಿಕ ಕ್ಷಮತೆ ಪರೀಕ್ಷೆಗೆ ಅರ್ಹತೆ ಗಳಿಸಿಕೊಂಡಿದ್ದಾರೆ. ಮೊದಲ ದಿನ ಬೆಳಗಾವಿ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದ 700 ಜನರಿಗೆ ಫಿಟ್‌ನೆಸ್ ಪರೀಕ್ಷೆ ನಡೆಯಿತು. ಇದರಲ್ಲಿ 625 ಜನ ಹಾಜರಾಗಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಅಭ್ಯರ್ಥಿಗಳನ್ನು ಜಿಲ್ಲಾ ಕ್ರೀಡಾಂಗಣದ ಒಳಗಡೆ ಬಿಡಲಾಯಿತು.
ಮಂಗಳವಾರ ಆರಂಭವಾದ ಫಿಟ್‌ನೆಸ್ ಪರೀಕ್ಷೆ ಬೇರೆ ಬೇರೆ ಜಿಲ್ಲೆಯವರಿಗೆ ಡಿ. 8ರ ತನಕ ನಡೆಯಲಿದೆ. ಮೊದಲ ಅರ್ಹತಾ ಮಾನದಂಡವಾಗಿ 100 ಜನರ ಪ್ರತಿ ತಂಡಕ್ಕೆ ಎರಡು ಬ್ಯಾಚ್‌ಗಳಲ್ಲಿ ಒಟ್ಟು 1600 ಮೀಟರ್ ಓಡಿಸಲಾಯಿತು. ಸೇನಾ ನೇಮಕಾತಿ ನಿಯಮದ ಪ್ರಕಾರ ಐದು ನಿಮಿಷ 45 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದವರು ಮುಂದಿನ ಸುತ್ತಿಗೆ ಅರ್ಹತೆ ಗಳಿಸಿಕೊಳ್ಳುತ್ತಾರೆ.
ಚಳಿಯಲ್ಲಿಯೂ ಹುಮ್ಮಸ್ಸಿನಿಂದ ಓಡಿದ ಯುವಕರಲ್ಲಿ ಹಲವರು ನಿಗದಿತ ಅವಧಿಯಲ್ಲಿ ಗುರಿ ಮುಟ್ಟಿ ಸಂಭ್ರಮಿಸಿದರೆ, ಇನ್ನು ಕೆಲವರು ಕೂದಲೆಳೆಯ ಅಂತರದಲ್ಲಿ ಅವಕಾಶ ಕಳೆದುಕೊಂಡು ಕಣ್ಣೀರು ಸುರಿಸಿದರು. ಇನ್ನೂ ಕೆಲವರು ಗಾಯಗೊಂಡು ಓಟದ ಟ್ರ್ಯಾಕ್‌ನಲ್ಲಿ ಬಿದ್ದರು. ಈ ನೇಮಕಾತಿ ರ್‍ಯಾಲಿಯಲ್ಲಿ ಬೆಳಗಾವಿ, ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ.
ರ್‍ಯಾಲಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ ’ಸೇನೆಗೆ ಸೇರಲು ಬಯಸುವ ಯುವಜನತೆಗೆ ಇದು ಉತ್ತಮ ಅವಕಾಶವಾಗಿದ್ದು, ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳೂ ಪಾಲ್ಗೊಂಡಿದ್ದಾರೆ. ಅವರಿಗೆ ಈಗಾಗಲೇ ಒಂದು ತಿಂಗಳು ವಿಶೇಷ ತರಬೇತಿ ನೀಡಲಾಗಿದೆ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್. ಎಲ್. ಅರಸಿದ್ಧಿ ಮಾತನಾಡಿ ‘ಸೇನೆ ಸೇರಲು ಇದು ಉತ್ತಮ ಅವಕಾಶ. ಬೇರೆ ಬೇರೆ ಜಿಲ್ಲೆಗಳಿಂದ ಬಂದ ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ಸ್ಥಳೀಯವಾಗಿ ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರ ಓಡಾಟಕ್ಕೆ ತೊಂದರೆಯಾಗದಂತೆ ನಗರ ಸಾರಿಗೆಯ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.