ಹನುಮಸಾಗರ: ಹನುಮಸಾಗರ ಪಟ್ಟಣದಿಂದ ಇಳಕಲ್‌ಗೆ ಸರಿಯಾದ ಸಮಯಕ್ಕೆ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್‌ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
‘ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ಸರಿಯಾಗಿ ಬಸ್‌ಗಳ ವ್ಯವಸ್ಥೆ ಇಲ್ಲದೆ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಆಗುತ್ತಿಲ್ಲ. ಇರುವಂತಹ ಬಸ್ಸಿನಲ್ಲಿ ಬಾಗಿಲ ಬಳಿ ತೂರಿಕೊಂಡು ಪ್ರಾಣದ ಹಂಗು ತೊರೆದು ಹೋಗುವ ಪರಿಸ್ಥಿತಿ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ಗಳನ್ನು ಬಿಡುವಂತೆ ಇಳಕಲ್ ಹಾಗೂ ಗಜೇಂದ್ರಗಡ ಡಿಪೋ ವ್ಯವಸ್ಥಾಪಕರಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ’ ಎಂದು ತಿಳಿಸಿದರು.
‘ಬಸ್ ನಿಲ್ದಾಣದ ವೇಳಾಪಟ್ಟಿ ಪ್ರಕಾರ ಇಳಕಲ್ ಪಟ್ಟಣಕ್ಕೆ ತೆರಳಲು ಬೆಳಿಗ್ಗೆ ಬಸ್ ಬಿಡಬೇಕು. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ತುಂಬಾ ತೊಂದರೆ ಆಗುತ್ತಿದ್ದು, ನಿತ್ಯವೂ ತರಗತಿಗೆ ಗೈರಾಗುವುದು, ತಡವಾಗಿ ಹೋಗುವುದು ಅನಿವಾರ್ಯವಾಗಿದೆ. ಕೂಡಲೇ ಸಮಸ್ಯೆ ಸರಿಪಡಿಸಬೇಕೆಂದು ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ಪ್ರವೀಣ ಕುಮಾರ, ತಿಪ್ಪಣ್ಣ, ಪಲ್ಲವಿ, ಪವಿತ್ರಾ, ಭೀಮವ್ವ, ಸ್ವಪ್ನಾ , ನಾಗರಾಜ, ಇತರರು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಹನುಮಸಾಗರ ಪಿಎಸ್‌ಐ ಧನಂಜಯ ಹಿರೇಮಠ, ವಿದ್ಯಾರ್ಥಿಗಳ ತೊಂದರೆಯನ್ನು ಆಲಿಸಿ ನಂತರ ಮನವಿ ಸ್ವೀಕರಿಸಿ, ಇಳಕಲ್, ಗಜೇಂದ್ರಗಡ ಹಾಗೂ ಕುಷ್ಟಗಿ ಡಿಪೊ ವ್ಯವಸ್ಥಾಪಕರಿಗೆ ವಿಷಯ ತಿಳಿಸಿ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.