ಕೊಪ್ಪಳ: ಅನಾರೋಗ್ಯದಿಂದ ಬಳಲುತ್ತಿದ್ದ ಕೊಪ್ಪಳ ತಾಲ್ಲೂಕಿನ 21 ವರ್ಷದ ಯುವತಿಗೆ ಚಿಕಿತ್ಸೆ ಕೊಡಿಸದೇ ದೇವದಾಸಿ ಪಟ್ಟ ಕಟ್ಟಿದ್ದ ಆರೋಪದ ಮೇಲೆ ಆಕೆಯ ಪೋಷಕರು ಮತ್ತು ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ಯುವತಿಯ ತಂದೆ ಯಮನೂರಪ್ಪ, ತಾಯಿ ಹುಲಿಗೆವ್ವ ಮತ್ತು ಸಹೋದರಿ ಮೂಕವ್ವ ಅವರನ್ನು ಬಂಧಿಸಲಾಗಿದೆ. ಮೂಕವ್ವ ಪತಿ ಹನುಮಪ್ಪನ ಪತ್ತೆಗೆ ಶೋಧ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘2018ರ ಬಳಿಕ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ದೇವದಾಸಿ ಪ್ರಕರಣವಿದು. ಯುವತಿ ಚೇತರಿಸಿಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ. ತಿಳಿಸಿದರು.
ಯುವತಿ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದ ಕಾರಣ ‘ಮುತ್ತು’ ಕಟ್ಟಿಸಿದರೆ ಗುಣಮುಖ ಆಗುವರು ಎಂಬ ಮೂಢನಂಬಿಕೆಯಿಂದ ಹೆತ್ತವರೇ ಹುಲಿಗಿಯಲ್ಲಿ ಕಳೆದ ಮೇ ತಿಂಗಳಲ್ಲಿ ಯುವತಿಯನ್ನು ದೇವದಾಸಿಯಂಥ ಅನಿಷ್ಠ ಪದ್ಧತಿಗೆ ನೂಕಿದ್ದರು. ಇದರ ಬಗ್ಗೆ ಸಂಶಯಪಟ್ಟ ದಲಿತ ಸಮುದಾಯದ ಮುಖಂಡರು, ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅವರು ಗ್ರಾಮಕ್ಕೆ ಭೇಟಿ ನೀಡಿದಾಗ, ಪ್ರಕರಣ ಬೆಳಕಿಗೆ ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.