ಕೊಪ್ಪಳ: ಆಷಾಢ ಏಕಾದಶಿ ಅಂಗವಾಗಿ ನಗರದ ಭಾವಸಾರ ಕ್ಷತ್ರಿಯ ಸಮಾಜದ ಪಾಂಡುರಂಗ ದೇವಸ್ಥಾನದಲ್ಲಿ ಭಾನುವಾರ ಮಾಡಿರುವ ರಾಷ್ಟ್ರಧ್ವಜದ ಬಣ್ಣಗಳ ವಿಶೇಷ ಅಲಂಕಾರ ಎಲ್ಲರ ಗಮನ ಸೆಳೆಯಿತು.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದವರು ಈ ಬಾರಿ ಆಷಾಢ ಏಕಾದಶಿಯ ಅಲಂಕಾರ ಮಾಡಿದ್ದಾರೆ.
ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಡಾ.ಬಿ. ಆರ್. ಅಂಬೇಡ್ಕರ್, ಗೋಪಾಲಕೃಷ್ಣ ಗೋಖಲೆ, ಜಾನ್ಸಿರಾಣಿ ಲಕ್ಷ್ಮಿಬಾಯಿ, ಖಾನ್ ಅಬ್ದುಲ್ ಗಫರ್ ಖಾನ್, ಗೋವಿಂದ ವಲ್ಲಭ ಪಂಥ್, ಮದನಮೋಹನ ಮಾಳವೀಯ, ಕಸ್ತೂರಿ ಬಾ ಗಾಂಧಿ, ಒನಕೆ ಓಬ್ಬವ್ವ, ಬಲವಂತ ಫಡಕೆ, ಸರೋಜಿನಿ ನಾಯ್ದು ಹೀಗೆ 40 ಜನ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ದೇವಸ್ಥಾನದಲ್ಲಿ ಹಾಕಲಾಗಿದೆ. ಅಂದಾಜು 100 ರಾಷ್ಟ್ರಧ್ವಜಗಳಿಂದ ದೇವಸ್ಥಾನದ ಒಳಗಿನ ಭಾಗವನ್ನು ಅಲಂಕಾರ ಮಾಡಿ, ಭಾರತ ನಕಾಶೆ ಬಿಡಿಸಲಾಗಿದೆ.
‘ಪಂಢರಪುರದಲ್ಲಿ ಅಷಾಢ ಏಕಾದಶಿಯಂದು ಮಾಡುವ ಸಂಪ್ರದಾಯವನ್ನು ಪಾಲಿಸಿ ಇಲ್ಲಿನ ದೇವಸ್ಥಾನದಲ್ಲಿಯೂ ಧಾರ್ಮಿಕ ವಿಧಿವಿಧಾನಗಳನ್ನು ಮಾಡಲಾಗುತ್ತದೆ. ವಿಶೇಷ ಅಲಂಕಾರ, ಪುಷ್ಪಾರ್ಚನೆ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು‘ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ನಿತೇಶ್ ಪುಲಸ್ಕರ್ ತಿಳಿಸಿದರು.
‘ಪ್ರತಿ ವರ್ಷ ಒಂದೊಂದು ವಿಷಯ ಆಧಾರಿತವಾಗಿ ದೇವಸ್ಥಾನ ಅಲಂಕರಿಸಲಾಗುತ್ತದೆ. ಈ ಬಾರಿ ಅಮೃತ ಮಹೋತ್ಸವ ವಿಷಯ ಇಟ್ಟುಕೊಂಡು ಅಲಂಕಾರ ಮಾಡಲಾಗಿದೆ‘ ಎಂದು ಸಮಾಜದ ಗೌರವಾಧ್ಯಕ್ಷ ರಮೇಶ ನಾವಡೆ, ಅಧ್ಯಕ್ಷ ಪ್ರಭು ಜಾಧವ್, ಉಪಾಧ್ಯಕ್ಷ ನಾಗರಾಜ ಹಂಚಾಟೆ, ಖಜಾಂಚಿ ವಾಮನರಾವ ಜ್ಞಾನಮೋಟೆ, ಗೌರವಾಧ್ಯಕ್ಷ ರಮೇಶ ನಾವಡೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.