ADVERTISEMENT

ರಾಮನ ಪ್ರಾಣ ಪ್ರತಿಷ್ಠಾಪನೆ: ನಿರ್ವಿಘ್ನವಾಗಿ ಕಾರ್ಯಕ್ರಮ ನಡೆಯಲು ಹೋಮ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 18:26 IST
Last Updated 21 ಜನವರಿ 2024, 18:26 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೋಮ ನಡೆಸಿದರು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೋಮ ನಡೆಸಿದರು   

ಗಂಗಾವತಿ (ಕೊಪ್ಪಳ ಜಿಲ್ಲೆ): ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಿರ್ವಿಘ್ನವಾಗಿ ನಡೆಯಬೇಕು ಎಂದು ಪ್ರಾರ್ಥಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ತಾಲ್ಲೂಕಿನ ಅಂಜನಾದ್ರಿಯಲ್ಲಿ ಹೋಮ ನೆರವೇರಿಸಿದರು.

ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿಯೂ ಪೂಜೆ ಸಲ್ಲಿಸಿದ ಅವರು ‘ದೇಶ ಕಟ್ಟುವ ಪ್ರಧಾನಿ ಕಾಯಕಕ್ಕೆ ನಾವೆಲ್ಲರೂ ಕೈ ಜೋಡಿಸುತ್ತಿದ್ದೇವೆ. ದೇಶದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸಿಕೊಂಡಿದ್ದೇನೆ’ ಎಂದರು.

ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿ, ‘ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಓಲೈಸಲು ಹಾಗೂ ಅವರನ್ನು ಮತಬ್ಯಾಂಕ್‌ ಆಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಶ್ರೀರಾಮನನ್ನು ವಿರೋಧಿಸುತ್ತಿದೆ. ಬಯಲಲ್ಲಿದ್ದ ಶ್ರೀರಾಮ ಭವ್ಯ ಮಂದಿರಕ್ಕೆ ಬರಬೇಕು ಎನ್ನುವುದು ಪ್ರಧಾನಿ ಅವರ ಸಂಕಲ್ಪವಾಗಿತ್ತು. ಅಂದುಕೊಂಡಂತೆ ಈಗ ಎಲ್ಲವೂ ಆಗಿದೆ’ ಎಂದರು.

ADVERTISEMENT

ವಿಶೇಷ ಪೂಜೆ: ರಾಮಮಂದಿರ ಉದ್ಘಾಟನೆಯಾಗಲಿರುವ ಹಿನ್ನೆಲೆಯಲ್ಲಿ ಸೋಮವಾರ ಅಂಜನಾದ್ರಿಯಲ್ಲಿ ವಿವಿಧ ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ತ್ರಿಕಾಲ ಪೂಜೆ, ರವಿಶಂಕರ ಗುರೂಜಿ ಅವರಿಂದ ರಾಮನ ಸ್ಮರಣೆ, ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೇರವಾಗಿ ತೋರಿಸಲು ಎಲ್‌ಇಡಿ ಪರದೆಯ ವ್ಯವಸ್ಥೆ, ಸಂಜೆ ದೀಪೋತ್ಸವ ಹಾಗೂ ರಾಮನಿಗೆ ಸಂಬಂಧಿಸಿದ ನೃತ್ಯಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ರಾಮನ ಮೂರ್ತಿ: ಬೆಂಗಳೂರಿನ ರಾಮಚಂದ್ರಪ್ಪ ಎಂಬ ಭಕ್ತರು ನೀಡಿದ ಒಂಬತ್ತು ಇಂಚು ಎತ್ತರದ ಪಂಚಲೋಹದ ರಾಮನ ಮೂರ್ತಿಯನ್ನು ಹೆಚ್ಚುವರಿ ಉಪವಿಭಾಗಾಧಿಕಾರಿ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಜಿಲ್ಲಾಡಳಿತದ ಪರವಾಗಿ ಸ್ವೀಕರಿಸಿದರು. 400 ಕೆ.ಜಿ. ತೂಕ ಹೊಂದಿರುವ ಇದು ಅಂದಾಜು ₹ 20 ಲಕ್ಷ ಮೌಲ್ಯ ಹೊಂದಿದೆ.

‘ಜಿಲ್ಲಾಡಳಿತ ಜೊತೆ ಚರ್ಚಿಸಿ ರಾಮನ ಮೂರ್ತಿಯನ್ನು ಎಲ್ಲಿ ಪ್ರತಿಷ್ಠಾಪಿಸಬೇಕು ಎನ್ನುವುದನ್ನು ನಿರ್ಧರಿಸಲಾಗುವುದು’ ಎಂದು ಮಾಲಗಿತ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.