ADVERTISEMENT

ಬೇವೂರಿನ ಭುವನೇಶ್ವರಿ ವೃತ್ತದಲ್ಲಿ ಬಸ್‌ ನಿಲ್ದಾಣ ನಿರ್ಮಾಣ: ಬಸವರಾಜ ರಾಯರಡ್ಡಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 16:21 IST
Last Updated 14 ಅಕ್ಟೋಬರ್ 2024, 16:21 IST
ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮಸ್ಥರು ಹೊಸ ಬಸ್ ನಿಲ್ದಾಣವನ್ನು ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಸಲ್ಲಿಸಿದರು
ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮಸ್ಥರು ಹೊಸ ಬಸ್ ನಿಲ್ದಾಣವನ್ನು ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಸಲ್ಲಿಸಿದರು   

ಯಲಬುರ್ಗಾ: ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿದ್ದ ಬಸ್ ನಿಲ್ದಾಣವನ್ನು ಭುವನೇಶ್ವರಿ ವೃತ್ತದ ಸಮೀಪದಲ್ಲಿಯೇ ನಿರ್ಮಿಸಬೇಕು ಎಂದು ಗ್ರಾಮಸ್ಥರು ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ರಾಯರಡ್ಡಿ, ವೃತದಲ್ಲಿ ದೊಡ್ಡ ಬಸ್ ನಿಲ್ದಾಣಕ್ಕೆ ಬೇಕಾದ ಸ್ಥಳವಕಾಶವಿಲ್ಲ. ಅಲ್ಲದೇ ಈಗಿರುವ ಆಸ್ಪತ್ರೆ ಅಥವಾ ಪೊಲೀಸ್ ಠಾಣೆ ಸ್ಥಳದಲ್ಲಿ ನಿರ್ಮಿಸುವುದು ಸೂಕ್ತವಲ್ಲ. ಆ ಇಲಾಖೆಯಿಂದ ಕೈಗೊಳ್ಳಬಹುದಾದ ಸಾರ್ವಜನಿಕ ಸೇವೆಗೆ ತೊಂದರೆಯಾಗಲಿದೆ. ಭವಿಷ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದರೆ ಸ್ಥಳದ ಕೊರತೆ ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಈಗಾಗಲೇ ಗುರುತಿಸಿದ ಸ್ಥಳದಲ್ಲಿಯೇ ಹೊಸ ನಿಲ್ದಾಣ ನಿರ್ಮಿಸುವುದು ಸೂಕ್ತವಾಗಿದೆ. ಈಗಾಗಲೇ ಅದೇ ಸ್ಥಳ ನಿಗದಿಯಾಗಿ ಸರ್ಕಾರದ ಹಂತದಲ್ಲಿ ಅಂತಿಮಗೊಂಡು ಟೆಂಡರ್ ಪ್ರಕ್ರಿಯೆ ನಡೆಯುತ್ತಿರುವುದರಿಂದ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಗ್ರಾಮಸ್ಥರ ಒತ್ತಾಯದ ಮೇರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ವೃತ್ತದಲ್ಲಿಯೇ ಮಿನಿ ನಿಲ್ದಾಣ ಮಾಡಬಹುದಾಗಿದೆ. ಈಗಿರುವ ನಿಲ್ದಾಣದ ಸ್ಥಳದಲ್ಲಿಯೇ ಸಣ್ಣ ನಿಲ್ದಾಣ ಮಾಡಲು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.

ಈ ವೇಳೆ ಮುಖಂಡ ಮಲ್ಲನಗೌಡ ಕೋನನಗೌಡ ಮಾತನಾಡಿ, ಗ್ರಾಮಸ್ಥರ ಅನುಕೂಲಕ್ಕಾಗಿ ದೊಡ್ಡ ನಿಲ್ದಾಣದ ಜತೆಗೆ ವೃತ್ತದಲ್ಲಿ ಸಣ್ಣ ನಿಲ್ದಾಣ ನಿರ್ಮಾಣಕ್ಕೆ ಶಾಸಕರು ನಿರ್ಧರಿಸಿರುವುದು ಖುಷಿಯಾಗಿದೆ. ದೂರದೃಷ್ಟಿಯ ಹಿನ್ನೆಲೆಯಲ್ಲಿ ಸ್ವಲ್ಪ ದೂರದಲ್ಲಿ ಬಸ್ ನಿಲ್ದಾಣ ಮಾಡುವ ಉದ್ದೇಶದ ಬಗ್ಗೆ ಶಾಸಕರು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದರಿಂದ ಹೊಸ ನಿಲ್ದಾಣದ ನಿರ್ಮಾಣಕ್ಕೆ ಸಹಮತವಿದೆ ಎಂದು ಹೇಳಿದರು.

ADVERTISEMENT

ಗ್ರಾಮದ ಮುಖಂಡರಾದ ವೀರಣ್ಣ ಹಳ್ಳಿ, ಶರಣಪ್ಪ ಪಳೋಟಿ, ಸೋಮಲಿಂಗಪ್ಪ ಕೊಳಜಿ, ಹನಮಂತಪ್ಪ ಚರಾರಿ, ಸಂಗಮೇಶ ಗೊಂದಿ, ಯಮನಪ್ಪ ಉಪ್ಪಾರ, ಹೇಮಂತ ಅಂಚಿ, ನಿಂಗಜ್ಜ ಕೊಳಜಿ, ಬಸಣ್ಣ ಚಿತವಾಡಗಿ, ಹನಮೇಶ ಕೋನನಗೌಡ, ಮಲ್ಲಪ್ಪ ಕರಡಿ, ದೇವರಾಜ ಹಳ್ಳಿ, ಶಂಕರ ಹಳ್ಳಿ, ಹನಮಂತ ಹಿಟ್ಟಿನ್, ಶರಣಪ್ಪ ಬಳಿಗಾರ ಸೇರಿ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.