ಗಂಗಾವತಿ: ಗಂಗಾವತಿ ತಾಲ್ಲೂಕಿನಲ್ಲಿ ವನ್ಯಜೀವಿಗಳ ಪ್ರಾಣಿ ಸಂಕುಲವೇ ಇದೆ. ಅದರಲ್ಲೂ ಕರಡಿಗಳ ಸಂಖ್ಯೆ ಹೆಚ್ಚಿದ್ದು, ಇತ್ತೀಚಿನ ದಿನಗಳಲ್ಲಿ ಅವುಗಳ ರಕ್ಷಣೆಯ ಜವಾಬ್ದಾರಿ ತೀರ ಅಗತ್ಯವಾಗಿದೆ. ಈ ಕಾರಣಕ್ಕೆ ತಾಲ್ಲೂಕಿನಲ್ಲಿ ಕರಡಿ ಧಾಮ ಸ್ಥಾಪಿಸಲು ಪ್ರಾಣಿಪ್ರಿಯರು ಕೋರಿದ್ದಾರೆ.
ಪ್ರಾಕೃತಿಕವಾಗಿ ಬೆಟ್ಟ-ಗುಡ್ಡಗಳ ಹಚ್ಚ-ಹಸಿರುನಿಂದ ಕೂಡಿರುವ ಗಂಗಾವತಿ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ವನ್ಯಜೀವಿಗಳಿವೆ. ಅದರಲ್ಲೂ ಚಿರತೆ ಹಾಗೂ ಕರಡಿಗಳ ಸಂಖ್ಯೆ ಹೆಚ್ಚಿದ್ದು, ಕರಡಿ ಹಾಗೂ ಚಿರತೆ ಧಾಮವನ್ನು ಮಾಡುವಂತೆ ಸುಮಾರು ವರ್ಷಗಳಿಂದಪ್ರಾಣಿ ಪ್ರಿಯರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆಇದುವರೆಗೂ ಸರ್ಕಾರ ಕರಡಿ ಧಾಮ ನಿರ್ಮಾಣಕ್ಕೆತಾತ್ವಿಕ ಒಪ್ಪಿಗೆ ನೀಡಿದ್ದರೂ ಪೂರ್ಣ ಪ್ರಮಾಣದ ಅನುಮೋದನೆ ದೊರೆತಿಲ್ಲ.
40 ಕ್ಕೂ ಹೆಚ್ಚು ಕರಡಿ:ಗಂಗಾವತಿ, ಕೊಪ್ಪಳ ಹಾಗೂ ಕನಕಗಿರಿ ಭಾಗದಲ್ಲಿ ಹೆಚ್ಚು ಕರಡಿಗಳ ಸಂತತಿ ಇರುವುದನ್ನು ಕಾಣಬಹುದು. ಅದರಲ್ಲೂ ಗಂಗಾವತಿ ಭಾಗದಲ್ಲಿ ಸುಮಾರು 30 ರಿಂದ 40 ಕ್ಕೂ ಹೆಚ್ಚು ಕರಡಿಗಳು ಇವೆ ಎಂದು ಹೇಳಲಾಗುತ್ತಿದೆ. ಚಿಕ್ಕಬೆಣಕಲ್, ಹಿರೇಬೆಣಕಲ್, ಸಣಾಪುರ, ವಿರುಪಾಪುಗಡ್ಡಿ, ಅಂಜನಾದ್ರಿ, ಹಿರೇಸೂಳಿಕೆರೆ, ಆಗೋಲಿ, ಜಬ್ಬಲಗುಡ್ಡ, ಮುಕ್ಕುಂಪಿ, ಮೆತಗಲ್ ಸೇರಿದಂತೆ ಹಲವು ಸ್ಥಳಗಳಲ್ಲಿ ಕರಡಿಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ.
ಕರಡಿ ಧಾಮಕ್ಕೆ ಆಗ್ರಹ:ಕಾಡುಪ್ರಾಣಿಗಳಿಂದ ಜನಸಾಮಾನ್ಯರ ಹಾಗೂ ಪ್ರವಾಸಿಗರ ರಕ್ಷಣೆಗಾಗಿ ತಾಲ್ಲೂಕಿನಲ್ಲಿ ಕರಡಿ ಹಾಗೂ ಚಿರತೆ ಧಾಮಗಳನ್ನು ಸ್ಥಾಪನೆ ಮಾಡುವಂತೆ ಚಾರಣ ಬಳಗ, ಮಾಜಿವಿಧಾನ ಪರಿಷತ್‌ನ ಮಾಜಿ ಸದಸ್ಯಎಚ್.ಆರ್.ಶ್ರೀನಾಥ್, ಉದ್ಯಮಿ ಅಶೋಕಸ್ವಾಮಿ ಹೇರೂರ ಸೇರಿದಂತೆ ಹಲವರು ಒತ್ತಾಯಿಸುತ್ತಲೇ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.