ಕೊಪ್ಪಳ: ‘ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ಬಡ ಕುಟುಂಬದ ವಿದ್ಯಾರ್ಥಿಗಳ ಕಾಲೇಜು ಶಿಕ್ಷಣದ ವೆಚ್ಚ ಭರಿಸುವ ಕಾರ್ಯಕ್ಕೆ ವಕ್ಫ್ ಅಧೀನದಲ್ಲಿರುವ ಸಂಸ್ಥೆಗಳು ಮುಂದಾಗಬೇಕು’ ಎಂದು ಇಲ್ಲಿನ ಜವಾಹರ್ ರಸ್ತೆಯ ಯೂಸೂಫಿಯಾ ಮಸೀದಿಯ ಮೌಲಾನಾ ಮುಫ್ತಿ ನಜೀರ್ ಅಹ್ಮದ್ ಹೇಳಿದರು.
ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿಗೆ ನಗರದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಧಾರ್ಮಿಕ ಸ್ವಾತಂತ್ರ್ಯ ಇರುವ ಆಧುನಿಕ ಶಿಕ್ಷಣದ ಕಾಲೇಜು ಕೊಪ್ಪಳದಲ್ಲಿ ಸ್ಥಾಪನೆಯಾಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಚಿಂತನೆ ಮಾಡಬೇಕು’ ಎಂದರು.
ಶಾದಿಮಹಲ್ ಆಡಳಿತ ಮಂಡಳಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರ ಮಾತ್ರವಲ್ಲದೇ ಗ್ರಾಮೀಣ ಮತ್ತು ಬೇರೆ ತಾಲ್ಲೂಕಿನ ಪ್ರತಿಭಾವಂತ ಮುಸ್ಲಿಂ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಧನ ಸಹಾಯ ನೀಡಲಾಯಿತು.
ಕಾರ್ಯಕ್ರಮವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು. ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ರಾಜ್ಯ ವಕ್ಫ್ ಬೋರ್ಡ್ ಹಣಕಾಸು ಸಮಿತಿ ಅಧ್ಯಕ್ಷ ಅಸೀಫ್ ಅಲಿ, ಜಿಲ್ಲಾ ವಕ್ಫ್ ಬೋರ್ಡ್ ಕಮಿಟಿ ಅಧ್ಯಕ್ಷ ಪೀರಾಹುಸೇನ್ ಹೊಸಳ್ಳಿ, ಅಲಿಸಾಬ ಗಬ್ಬೂರು, ಯುಸೂಫಿಯಾ ಮಸ್ಜಿದ್ ಸಮಿತಿ ಅಧ್ಯಕ್ಷ ಯಜ್ದಾನಿ ಪಾಷಾ, ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ನವೀದ್, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಶಾದಿಮಹಲ್ ಕಮಿಟಿಯ ಅಧ್ಯಕ್ಷ ಅಬ್ದುಲ್ ಅಜೀಜ್ ಚೌಥಾಯಿ ಪಾಲ್ಗೊಂಡಿದ್ದರು.
ಮುಖಂಡರಾದ ಸಲೀಂ ಅಳವಂಡಿ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರಾದ ಸಲೀಂ ಖಾದ್ರಿ, ಯುಸೂಫ್ ಇಪ್ಪು, ಸಲೀಂ ಗೊಂಡಬಾಳ, ಅಯೂಬ್ ಖಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.