ADVERTISEMENT

ಯಶಸ್ವಿ ಮಹಿಳೆಯ ಹಿಂದೆ ಹಲವು ಪುರುಷರು ಇರುತ್ತಾರೆ: ಎಸ್.ಪಿ. ಯಶೋಧಾ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:20 IST
Last Updated 4 ಜುಲೈ 2024, 14:20 IST
ಮುನಿರಾಬಾದ್ ಸಮೀಪ ಹೊಸ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ಒಂಟಿಗೋಡಿ ಅವರು ಮಕ್ಕಳೊಂದಿಗೆ ಬಿಸಿಯೂಟ ಸವಿದರು
ಮುನಿರಾಬಾದ್ ಸಮೀಪ ಹೊಸ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ಒಂಟಿಗೋಡಿ ಅವರು ಮಕ್ಕಳೊಂದಿಗೆ ಬಿಸಿಯೂಟ ಸವಿದರು   

ಮುನಿರಾಬಾದ್: ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವಂತೆ, ಯಶಸ್ವಿ ಮಹಿಳೆಯ ಹಿಂದೆ ಹಲವು ಪುರುಷರು ಇರುತ್ತಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಿಗೋಡಿ ಅವರು ಅನುಭವ ಹಂಚಿಕೊಂಡರು.

ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮತ್ತು ಅಮ್ಮ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ನಡೆದ ಪ್ರತಿಭಾ ಪುರಸ್ಕಾರ, ಕಾನೂನು ಅರಿವು ಮತ್ತು 'ಬದುಕು ಬದಲಿಸಲು ಒಂದು ಮಾತು' ಎಂಬ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನನ್ನ ಹುದ್ದೆಯನ್ನು ನೋಡಿದ ತಕ್ಷಣ ಇವರು ಯಾವುದೋ ಪ್ರತಿಷ್ಠಿತ ಶಾಲೆಯಲ್ಲಿ ಓದಿರಬಹುದು ಅಂದುಕೊಂಡರೆ ಅದು ತಪ್ಪು. ನಾನು ಕೂಡ ನಿಮ್ಮ ಹಾಗೆ ಗ್ರಾಮೀಣ ಭಾಗದ ಕನ್ನಡ ಶಾಲೆಯಲ್ಲಿ ಓದಿದ್ದೇನೆ. ಭಾಷೆ ಒಂದು ಕಲಿಕೆಯ ಮಾಧ್ಯಮವಷ್ಟೇ, ಆದರೆ ಮಾತೃ ಭಾಷೆಯಲ್ಲಿನ ಶಿಕ್ಷಣ ಉತ್ತಮ ಫಲಿತಾಂಶ ನೀಡಲಿದೆ ಎಂದು ನನ್ನ ಅಭಿಪ್ರಾಯ. ನನ್ನ ಅಧ್ಯಯನದ ಯಾವುದೇ ಹಂತದಲ್ಲಿ ಕೂಡ ರಾಂಕ್ ಬಂದ ಉದಾಹರಣೆ ಇಲ್ಲ. ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ ಅವರೇ ನನಗೆ ಸ್ಪೂರ್ತಿ.

ADVERTISEMENT

ನಿರಂತರ ಅಧ್ಯಯನ, ಬದುಕಿನಲ್ಲಿ ಶಿಸ್ತು ಮತ್ತು ಉನ್ನತ ಗುರಿ ನನ್ನನ್ನು ಈ ಸ್ಥಾನಕ್ಕೆ ತಂದಿದೆ. ನನ್ನ ಸಾಧನೆಯ ಹಿಂದೆ ನಮ್ಮ ತಂದೆ ಅಣ್ಣ ಹಾಗೂ ನನ್ನ ಪತಿ ಇವರ ಪ್ರೋತ್ಸಾಹ ಇದೆ ಎಂದು ಅನುಭವ ಹಂಚಿಕೊಂಡರು.

ಕಳೆದ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿದ್ದು, ಸಿಸಿ ಕ್ಯಾಮೆರಾ ಕಣ್ಗಾವಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ, ಆದರೆ ಇದೊಂದೇ ಕಾರಣವಲ್ಲ. ನೀವು ಪ್ರಾಮಾಣಿಕವಾಗಿ ಓದಿದರೆ ಬೆಂಚಿಗೆ ಒಂದು ಸಿಸಿ ಕ್ಯಾಮೆರಾ ಹಾಕಿದರೂ ಹೆದರಬೇಕಾಗಿಲ್ಲ.

ಎಸ್ ಎಸ್ ಎಲ್ ಸಿ ಪರೀಕ್ಷೆ ಎಂದರೆ ಭಯಬೇಡ, ಹೆಮ್ಮೆಇರಲಿ. 10ನೇ ತರಗತಿ ಪ್ರಮುಖ ಘಟ್ಟ ನಿಜ ಪರೀಕ್ಷಾ ಭಯ ಬಿಟ್ಟು ಬಿಡಿ. ಪ್ರಶ್ನೆ ಪತ್ರಿಕೆ ಪಡೆದ ಕೂಡಲೇ ಉತ್ತರಿಸುವುದು ಬೇಡ. ಮೊದಲು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಸರಳ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ನಂತರ ಉಳಿದವುಗಳಿಗೆ ಆದ್ಯತೆ ಕೊಡಿ. ಅಧ್ಯಯನ ಮಾಡುವಾಗ ಕಠಿಣ ಎನಿಸುವಂತಹ ವಿಷಯಗಳನ್ನು ಸವಾಲಾಗಿ ತೆಗೆದುಕೊಂಡು ಪದೇಪದೇ ಓದಿರಿ. ಮೊಬೈಲ್ ಲೋಕದಿಂದ ಹೊರಬಂದು ಯೋಜನಾ ಬದ್ಧವಾಗಿ, ವೇಳಾಪಟ್ಟಿ ಪ್ರಕಾರ ಅಭ್ಯಾಸ ಮಾಡಬೇಕು.

ಶಿಕ್ಷಕ-ಪಾಲಕರಿಗೊಂದು ಕಿವಿಮಾತು:

ಶಿಕ್ಷಕರು ಶಾಲೆಯಲ್ಲಿ ಅಥವಾ ಮನೆಯಲ್ಲಿ ಪಾಲಕರು ಯಾವುದೇ ವಿಷಯದ ಮೇಲಾಗಲಿ ಮಕ್ಕಳನ್ನು ಇನ್ನೊಬ್ಬರಿಗೆ ದಯವಿಟ್ಟು ಹೋಲಿಕೆ ಮಾಡಬೇಡಿ. ಇದು ಮಕ್ಕಳಲ್ಲಿ ಕೀಳರಿಮೆಯನ್ನು ಉಂಟುಮಾಡುತ್ತದೆ. ಹುಟ್ಟಿದಾಗ ಮಕ್ಕಳು ಜಾಣ ದಡ್ಡರೆಂದು ಹುಟ್ಟುವುದಿಲ್ಲ, ಮಕ್ಕಳು ಒಂದೇ ತರಹ ಇದ್ದರೂ ಸಾಮರ್ಥ್ಯದಲ್ಲಿ ವಿಭಿನ್ನವಾಗಿರುತ್ತಾರೆ.

ಕನ್ಯಾ ಪಿತೃಗಳಿಗೆ ಕಿವಿಮಾತು: ಗಂಡುಗಳು ನೌಕರಿಯಲ್ಲಿರಬೇಕು, ಶ್ರೀಮಂತರಾಗಿರಬೇಕು ಎಂಬ ಧೋರಣೆ ತಪ್ಪು.

ಕೃಷಿಕರ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಇದು ದುರಂತ. ಒಕ್ಕಲುತನ ಕೂಡ ಶ್ರೇಷ್ಠ ವೃತ್ತಿ. ದಿನ ಬೆಳಗಾದರೆ ಮೂರು ಹೊತ್ತು ಊಟಕ್ಕೆ ಧಾನ್ಯ ಬೆಳೆಯಲೇಬೇಕು. ಅವರ ಕಡೆ ನಿರ್ಲಕ್ಷ ಸಲ್ಲದು. ತಾಂತ್ರಿಕ ಮತ್ತು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಬಹುದು. ಇದು ಕೂಡ ಲಾಭದಾಯಕ ವೃತ್ತಿಯಾಗಿದೆ.

ವಿದ್ಯಾರ್ಥಿನಿಯರಿಗೆ ಕಿವಿಮಾತು: ಓದುವ ವಯಸ್ಸಿನಲ್ಲಿ ಅನಗತ್ಯವಾಗಿ ಪ್ರೀತಿ-ಪ್ರೇಮದ ಸುಳಿಗೆ ಸಿಲುಕಬೇಡಿ, ಅದಕ್ಕೆ ಅವಕಾಶವನ್ನೂ ಕೊಡಬೇಡಿ. ನಿಮ್ಮ ಆದ್ಯತೆ ನಿಮ್ಮ ಗುರಿಯಾಗಿರಲಿ.

ವಿದ್ಯಾರ್ಥಿಗಳಿಗೆ ಕಿವಿಮಾತು: ಮದ್ಯ, ಮಾದಕ ವಸ್ತು ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ದುರಭ್ಯಾಸ ನಿಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳಿ. ಮಾದಕ ವಸ್ತು ಸೇವನೆಯ ಬಗ್ಗೆ ಮಾಹಿತಿ ಇದ್ದರೆ ಶಾಲಾ ಮುಖ್ಯಸ್ಥರಿಗೆ ತಿಳಿಸಿ, ಅಥವಾ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ112 ಇದಕ್ಕೆ ಕರೆ ಮಾಡಿ ಮಾಹಿತಿ ನೀಡಿ. ಭಯ ಬೇಡ ನಿಮ್ಮ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಪಿಡಿಓ ವೀರೇಶ್ ಅವರು ಮಾತನಾಡಿ, ಮಹಿಳೆಯಾಗಿ, ಗ್ರಾಮೀಣ ಭಾಗದಲ್ಲಿ ಓದಿ ಉನ್ನತ ಹುದ್ದೆಗೆ ಏರಿದ ಯಶೋಧಾ ಒಂಟಿಗೋಡಿ ಅವರ ಜೀವನವೇ ನಮ್ಮೆಲ್ಲರಿಗೆ ಮಾದರಿಯಾಗಲಿ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿ ಬಗನಾಳ ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಮ್ಮ ಪಂಚಾಯಿತಿ ಮಟ್ಟದಲ್ಲಿ ಬಹುಮಾನ ನೀಡುವ ಯೋಜನೆ ಜಾರಿಯಲ್ಲಿದೆ. ಎಸ್.ಪಿ.ಅವರ ಪ್ರೇರಣೆಯ ಮಾತುಗಳು ನಿಮಗೆ ಸ್ಪೂರ್ತಿಯಾಗಲಿ ಎಂದು ಹಾರೈಸಿದರು.

ಕ್ಲಸ್ಟರ್ ಮಟ್ಟದಲ್ಲಿ ನಡೆದ ಪ್ರಬಂಧ, ಚಿತ್ರಕಲೆ ಮತ್ತು ಕ್ರೀಡಾಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಣೆ ನಡೆಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಿ ಭಜಂತ್ರಿ, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಗ್ರಾಮೀಣ ಸಿಪಿಐ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕ್ರಯ್ಯ, ಮುನಿರಾಬಾದ್ ಠಾಣಾಧಿಕಾರಿ ಎಚ್.ಸುನೀಲ್, ಪ್ರಭಾರ ಮುಖ್ಯ ಶಿಕ್ಷಕಿ ಮಲಪ್ರಭಾ, ಸಾಹಿತಿ ಎಸ್.ಎಸ್. ಮುದ್ಲಾಪುರ, ಬಹುಮಾನ ಪ್ರಾಯೋಜಕರಾದ ಅಮ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸದ್ದಾಮ್ ಹುಸೇನ್ ಕಳ್ಳಿಮನಿ, ನಾಸಿರ್ ಹುಸೇನ್ ಗಣ್ಯರಾದ ನಿಂಗನಗೌಡ ಬೇವೂರು, ಅಬ್ದುಲ್ ವಾಹಿದ್, ಮಂಜುನಾಥ ಕಲಾಲ್, ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಎಲ್. ಇತರ ಗಣ್ಯರು ಇದ್ದರು. ಶಿಕ್ಷಕಿ ಶ್ರೀಗೌರಿ ನಿರೂಪಿಸಿದರು. ಶಿಕ್ಷಕಿ ಗೌರಮ್ಮ ವಂದಿಸಿದರು. ಮಕ್ಕಳೊಂದಿಗಿನ ಸಂವಾದದ ನಂತರ ಸ್‌ಪಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಬಿ ಇ ಓ ಅವರು ಮಕ್ಕಳೊಂದಿಗೆ ಬಿಸಿಯೂಟ ಸವಿದರು.

ಮುನಿರಾಬಾದ್ ಸಮೀಪ ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಕೂಟದಲ್ಲಿ ಜಯಶಾಲಿಯಾದ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಿಗೋಡಿ ಅವರು ಬಹುಮಾನ ವಿತರಿಸಿದರು
ಮುನಿರಾಬಾದ್ ಸಮೀಪ ಹೊಸ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಿಗೋಡಿ ಅವರು ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.