ಕನಕಗಿರಿ: ಕರ್ನಾಟಕದಲ್ಲಿ ಮಹಿಳೆಯರ ಹಬ್ಬಗಳಿಗೆ ಕೊರತೆ ಇಲ್ಲ. ನಾಗರಪಂಚಮಿ, ವರಮಹಾಲಕ್ಷ್ಮೀ ಪೂಜೆ, ಸೀಗೆ ಹುಣ್ಣಿಮೆ, ಗೌರಿ ಹುಣ್ಣಿಮೆ ಹೀಗೆ ಸಾಲು ಸಾಲು ಹಬ್ಬಗಳು ಇವೆ. ಸೀಗೆ ಹುಣ್ಣಿಮೆಯ ನಂತರ ಬರುವ ಗೌರಿ ಹುಣ್ಣಿಮೆಯನ್ನು ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.
ಗೌರಿ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಮಹಿಳೆಯರು, ಹೆಣ್ಣು ಮಕ್ಕಳು ಹೊಸ ಸೀರೆ ತೊಟ್ಟು ತಟ್ಟೆಯಲ್ಲಿ ಸಕ್ಕರೆ ಆರತಿ ಇಟ್ಟು ಬೆಳಗುತ್ತಾರೆ. ಹಬ್ಬದ ಸಡಗರ ಒಂದೆಡೆಯಾದರೆ ಗೌರಿ ಮೂರ್ತಿ ಸೇರಿದಂತೆ ಇತರೆ ಪ್ರಕಾರದ ದೇವರ ಮೂರ್ತಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತೊಂದು ಕಡೆ ಕಂಡು ಬರುತ್ತದೆ. ಇಲ್ಲಿನ ನರಸಿಂಹ ಚಿತ್ರಗಾರ ಕುಟುಂಬ ಕಳೆದ ಹಲವಾರು ವರ್ಷಗಳಿಂದಲೂ ಚಿತ್ರಕಲೆಯಲ್ಲಿ ನಿರತವಾಗಿದೆ.
ತವರು ಮನೆಯಲ್ಲಿ ಇಲ್ಲದ ಕಲೆಯನ್ನು ಮಹಿಳೆಯೊಬ್ಬರು ಗಂಡನ ಮನೆಯಲ್ಲಿ ಕಲಿತು ಸೈ ಎನ್ನಿಸಿಕೊಂಡಿದ್ದಾರೆ. ನರಸಿಂಹ ಚಿತ್ರಗಾರ ಅವರ ಪತ್ನಿ ಸಂಪತ್ ಲಕ್ಷ್ಮಿ ಅವರು ಬಳ್ಳಾರಿಯವರು. ಪತಿ ನರಸಿಂಹ ಚಿತ್ರಗಾರ ಹಾಗೂ ಅತ್ತೆ ರೇಣುಕಮ್ಮ ಅವರನ್ನು ಅನುಸರಿಸಿ ಚಿತ್ರ ಕಲೆಯಲ್ಲಿ ಪ್ರಾವೀಣ್ಯ ಸಾಧಿಸಿದ್ದಾರೆ.
ಕಾರ್ತಿಕ ಗೌರಿ, ಶಿವ ಪಾರ್ವತಿ ಗೌರಿ, ನಂದಿ ವಾಹನ ಗೌರಿ, ಕೊಂತೆಮ್ಮ( ಕೊಂತಿ ಸಾಲು), ಸೀಗೆ ಗೌರಿ, ದಿಸಿಗೌರಿ, ಇತರೆ ಪ್ರಕಾರದ ಗೌರಿ ಮೂರ್ತಿಗಳನ್ನು ಸಂಪತ್ ಲಕ್ಷ್ಮೀ ತಯಾರಿಸುತ್ತಾರೆ. ಗೌರಿ ಜತೆಗೆ ಗಣೇಶ, ಛತ್ರಿ, ಛಾಮರ, ಮುತ್ತಿನ ದಂಡಿ, ಲಕ್ಷ್ಮಿ ಕಂಬ, ದುರಗಮ್ಮ, ದ್ಯಾಮಮ್ಮ, ಕೆಂಚಮ್ಮ, ಇತರೆ ದೇವರುಗಳ ಮೂರ್ತಿಗಳನ್ನು ತಮ್ಮ ಕೈ ಚಳಕದಲ್ಲಿ ಸುಂದರವಾಗಿ ತಯಾರಿಸುತ್ತಾರೆ. ಅಲ್ಲದೆ ಬೀಸುವ ಕಲ್ಲು, ಮಕ್ಕಳ ಬಂಡಿ, ಮಣ್ಣೆತ್ತುಗಳು, ಸೆಗಣಿ ಗೊಂಬೆ, ಇತರೆ ಆಟಿಕೆ ಸಾಮಗ್ರಿಗಳನ್ನು ಸಿದ್ದ ಪಡಿಸುವಲ್ಲಿ ಲಕ್ಷ್ಮೀ ಚಿತ್ರಗಾರ ಅವರದ್ದು ಎತ್ತಿದ ಕೈ. ಹೀಗಾಗಿ ಪಟ್ಟಣ ಸೇರಿದಂತೆ ರಾಜ್ಯದಲ್ಲಿ ಇವರಿಗೆ ಉತ್ತಮ ಹೆಸರು ಬಂದಿದೆ.
ಕೆರೆ ಮಣ್ಣು, ಹುತ್ತಿನ ಮಣ್ಣು ಇವರ ಕಲೆಯ ಸಾಮಗ್ರಿಗಳಾದರೆ, ಮತ್ತೊಂದೆಡೆ ಹುಣಸೆ ಬೀಜಗಳನ್ನು ಪುಡಿ ಪುಡಿ ಮಾಡಿ ನೀರಿನಲ್ಲಿ ನೆನೆಸಿ ಗ್ರೈಂಡರ್‌ನಲ್ಲಿ ರುಬ್ಬಿ ಪೇಸ್ಟ್ ತರಹ ಮಾಡುತ್ತಾರೆ. ಕಟ್ಟಿಗೆ ಪುಡಿ, ಗೋಣಿ ಚೀಲದ ಗುಂಜು, ಮಿಶ್ರಣ ಮಾಡಿ ಕಟ್ಟಿಗೆಯಲ್ಲಿ ತಯಾರಿಸಿದ ಮೂರ್ತಿಗಳಿಗೆ ಹರಿದ ಬಟ್ಟೆಗಳನ್ನು ಹಚ್ಚಿ ಮೂರ್ತಿ ತಯಾರಿಸಿ ಆ ನಂತರ ಬಣ್ಣವನ್ನು ಹಚ್ಚಿ ಆಕರ್ಷಣೀಯವಾಗಿ ಗೊಂಬೆಗಳನ್ನು ತಯಾರಿಸುತ್ತಾರೆ.
ಮೂರ್ತಿಗಳಿಗೆ ಎಲ್ಲೆಡೆ ಬೇಡಿಕೆ
ಸಂಪತ್ ಲಕ್ಷ್ಮೀ ಕುಟುಂಬದವರು ತಯಾರಿಸುವ ಮೂರ್ತಿ ಗೊಂಬೆ ಕರಕುಶಲ ವಸ್ತುಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಆಂಧ್ರಪ್ರದೇಶ ವಿಜಯವಾಡ ಹೈದರಾಬಾದ್ ಬೆಂಗಳೂರು ಬಳ್ಳಾರಿ ರಾಯಚೂರು ಅನಂತಪುರ ಮಂತ್ರಾಲಯ ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರಾಟವಾಗುತ್ತಿವೆ. ಇನ್ನೂ ಗ್ರಾಮೀಣ ಭಾಗದಲ್ಲಿ ಇವರು ಪ್ರಸಿದ್ಧಿಯಾಗಿದ್ದಾರೆ. ಈ ಕಲೆ ಚಿತ್ರಗಾರ ಕುಟುಂಬಕ್ಕೆ ಆದಾಯ ತಂದು ಕೊಡುವುದಲ್ಲದೆ ಇಡೀ ಜಿಲ್ಲೆಯಲ್ಲಿ ಉತ್ತಮ ಕೆಲಸಗಾರರು ಎಂಬ ಹೆಸರು ಸಹ ತಂದುಕೊಟ್ಟಿದೆ. ಹೀಗಾಗಿ ಇಡೀ ವರ್ಷ ಸಂಪತ್ ಲಕ್ಷ್ಮೀ ಅವರು ಚಿತ್ರಗಾರಿಕೆಯಲ್ಲಿ ಮಗ್ನರಾಗಿರುತ್ತಾರೆ. ಸಾಮಗ್ರಿಗಳ ಗುಣಮಟ್ಟ ಸಹ ಉತ್ತಮವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಕನಕಾಚಲಪತಿ ಜಾತ್ರೆ ಗೌರಿ ಹುಣ್ಣಿಮೆ ಗಣೇಶನ ಹಬ್ಬ ಮೊಹರಂ ಸಮಯದಲ್ಲಿ ಇವರಿಗೆ ಊಟ ಮಾಡಲೂ ಸಮಯ ಇರುವುದಿಲ್ಲ. ಛತ್ರಿ ಛಾಮರ ದೇವರ ಮೂರ್ತಿ ಇತರೆ ಕೆಲಸಗಳನ್ನು ಗ್ರಾಹಕರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡಿಕೊಡುತ್ತಾರೆ. ಸಂಪತ್ ಲಕ್ಷ್ಮೀ ಅವರ ಕಲೆಯನ್ನು ಮೆಚ್ಚಿ ಇಲ್ಲಿನ ರಾಜೀವಗಾಂಧಿ ಯುವ ಶಕ್ತಿ ಸಂಘ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.