ಹನುಮಸಾಗರ:ಇಲ್ಲಿನ ವಿವಿಧ ಭಾಗಗಳಲ್ಲಿ ಶುಕ್ರವಾರ ಭೋಗಿ ಹಬ್ಬವನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು.
ಸಂಕ್ರಾಂತಿಯ ಹಿಂದಿನ ದಿನವನ್ನು ಭೋಗಿ ಹಬ್ಬ ಎಂದು ಆಚರಿಸಿ ದವಸ, ಧಾನ್ಯ ಹಾಗೂ ಖಾದ್ಯ ಪದಾರ್ಥಗಳನ್ನು ಒಬ್ಬರೊಗೊಬ್ಬರು ವಿನಿಮಯ ಮಾಡುವ ಮೂಲಕ ಹಬ್ಬ ಆಚರಿಸುವುದು ಸಂಪ್ರದಾಯವಾಗಿದೆ. ಕೆಲವರು ಇಂತಹ ಪದಾರ್ಥಗಳ ಜತೆಗೆ ಬೆಣ್ಣೆ, ಎಣ್ಣೆ, ಅಕ್ಕಿ, ಬೆಲ್ಲ, ಎಳ್ಳು ದಾನ ಮಾಡುವುದರ ಮೂಲಕ ಆಚರಿಸುವುದು ಕಂಡು ಬಂದಿತು.
ಮಳೆಯ ದೇವತೆಯಾಗಿರುವ ವರುಣ ದೇವನನ್ನು ಗೌರವಿಸಲು ಭೋಗಿ ಹಬ್ಬವನ್ನು ಅನಾದಿ ಕಾಲದಿಂದಲೂ ಉತ್ಸಾಹದಿಂದ ಆಚರಿಸಲಾಗುತ್ತದೆ. ರೈತರು ಮುಂಬರುವ ಋತುವಿನಲ್ಲಿ ಉತ್ತಮ ಮಳೆ ಪಡೆಯಬೇಕೆಂದು ನಾವು ಈ ದೇವರನ್ನು ಪ್ರಾರ್ಥಿಸುತ್ತೇವೆ. ಮುಂಬರುವ ವರ್ಷದ ಸುಗ್ಗಿಗಾಗಿ ದೇವರಿಂದ ಆಶೀರ್ವಾದ ಪಡೆಯಲು ಈ ಹಬ್ಬ ಆಚರಿಸಲಾಗುತ್ತದೆ ಎಂದು ಮಹಿಳೆ ಶಾಂತಮ್ಮ ಹೇಳಿದರು.
ಅಂಬಾಭವಾನಿ ದೇವಸ್ಥಾನ, ರಾಘವೇಂಧ್ರಸ್ವಾಮಿ ಮಠದ ಹತ್ತಿರ ಮಹಿಳೆಯರು ಪರಸ್ಪರ ಭೋಗಿ ನೀಡಿ ಸಂಕ್ರಾಂತಿ ಶುಭ ಹಾರೈಸಿದರು. ಅಲ್ಲದೆ ತಮ್ಮ ಮನೆಯ ಬಾಗಿಲುಗೆ ತಳಿರು ತೋರಣ ಕಟ್ಟಿ, ಮನೆಯ ಮುಂದೆ ರಂಗೋಲಿ ಬಿಡಿಸಿದ್ದರು, ಮನೆಗಳಲ್ಲಿ ಮಾಡಿದ ಭಕ್ಷ್ಯಗಳನ್ನು ನೆರೆಹೊರೆಯವರೊಂದಿಗೆ ವಿನಿಮಯ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.