ADVERTISEMENT

ಗಂಗಾವತಿ: ಪರವಾನಗಿ ಇಲ್ಲದೇ ಪ್ರವಾಸಿಗರಿಗೆ ಬೈಕ್‌ ಬಾಡಿಗೆ

ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವವರ ಜೀವದ ಜತೆ ಚೆಲ್ಲಾಟ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 8:06 IST
Last Updated 15 ಅಕ್ಟೋಬರ್ 2024, 8:06 IST
ಗಂಗಾವತಿ ತಾಲ್ಲೂಕಿನ ವಿರೂಪಾಪುರಗಡ್ಡೆಯಲ್ಲಿ ವಿದೇಶಿಗರು ಬೈಕ್ ಬಾಡಿಗೆ ಪಡೆದು ಚಲಾಯಿಸುತ್ತಿರುವುದು
ಗಂಗಾವತಿ ತಾಲ್ಲೂಕಿನ ವಿರೂಪಾಪುರಗಡ್ಡೆಯಲ್ಲಿ ವಿದೇಶಿಗರು ಬೈಕ್ ಬಾಡಿಗೆ ಪಡೆದು ಚಲಾಯಿಸುತ್ತಿರುವುದು   

ಗಂಗಾವತಿ: ತಾಲ್ಲೂಕಿನ ಆನೆಗೊಂದಿ, ಸಾಣಾಪುರ, ಹನುಮನಹಳ್ಳಿ ಭಾಗದ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸ್ಥಳೀಯರು ಪರವಾನಗಿ ಇಲ್ಲದೇ ದ್ವಿಚಕ್ರ ವಾಹನಗಳನ್ನು ಬಾಡಿಗೆ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಅಂಜನಾದ್ರಿ ಪ್ರಖ್ಯಾತಿಗೆ ಬಂದ ನಂತರ ಆನೆಗೊಂದಿ ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಸ್ಥಳೀಯರು ಪರವಾನಗಿ ಪಡೆಯದೇ ದ್ವಿಚಕ್ರ ವಾಹನಗಳನ್ನ ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿದ್ದು, ಸದ್ಯ ಆನೆಗೊಂದಿ ಭಾಗದಲ್ಲಿ ಇದು ವ್ಯಾಪಕವಾಗಿದೆ.

ವಿವಿಧ ದೇಶ ಮತ್ತು ರಾಜ್ಯಗಳಿಂದ ಆನೆಗೊಂದಿ ಭಾಗಕ್ಕೆ ಆಗಮಿಸುವ ಹಲವು ಪ್ರವಾಸಿಗರಿಗೆ ವಾಹನ ಚಲಾಯಿಸಲು ಬರುವುದಿಲ್ಲ. ಚಾಲನಾ ಪರವಾನಗಿಯೂ ಇರುವುದಿಲ್ಲ. ಆದರೂ ಸ್ಥಳೀಯರು ಪ್ರವಾಸಿಗರಿಗೆ ಬೈಕ್‌ಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ‌. ಇದರಿಂದ ಪ್ರವಾಸಿಗರು ಅಪಘಾತಗಳನ್ನು ಸೃಷ್ಟಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಬೇಸತ್ತಿದ್ದು, ಕ್ರಮಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರವಾಸಿಗರಿಗೆ ಸಂಗಾಪುರ, ಆನೆಗೊಂದಿ, ಹನುಮನಹಳ್ಳಿ, ವಿರುಪಾಪುರಗಡ್ಡೆ, ಸಾಣಾಪುರ, ಬಸಾಪುರ ಗ್ರಾಮದಲ್ಲಿ ಬೈಕ್ ಬಾಡಿಗೆಗೆ ಸಿಗುತ್ತಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರ ತನಕ ಒಂದು ಬೈಕ್‌ಗೆ ₹500ರಿಂದ ₹800 ಬಾಡಿಗೆ ಪಡೆಯುತ್ತಿದ್ದಾರೆ. ಈ ಭಾಗದಲ್ಲಿ ರೆಸಾರ್ಟ್‌ಗಳಲ್ಲಿ ಸೇರಿ ಸುಮಾರು ಐದು ನೂರು ದ್ವಿಚಕ್ರ ವಾಹನಗಳಿವೆ.

ಪ್ರವಾಸಿಗರು ದ್ವಿಚಕ್ರ ವಾಹನಗಳನ್ನು  ಬಾಡಿಗೆಗೆ ಪಡೆದು, ಆನೆಗೊಂದಿ ಭಾಗದ ವಾಟರ್ ಫಾಲ್ಸ್, ಸಾಣಾಪುರ ಕೆರೆ, ವಿರೂಪಾಪುರಗಡ್ಡೆ, ರಂಗಾಪುರ ಗ್ರಾಮದ ಗುಡ್ಡಗಾಡು ಪ್ರದೇಶ, ಕ್ಲೇಮಿಂಗ್ ಸ್ಪಾಟ್‌ಗಳಿಗೆ ತೆರಳಿ ಮಾದಕ ವಸ್ತುಗಳ ಸೇವನೆ ಜತೆಗೆ ಅನೈತಿಕೆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಬೈಕ್ ಬಾಡಿಗೆ ನೀಡುವ ಮಾಲೀಕರು ಬಹುತೇಕ ಸೆಕೆಂಡ್‌ ಹ್ಯಾಂಡ್ ಬೈಕ್ ಖರೀದಿ ಮಾಡಿ ಬಾಡಿಗೆಗೆ ನೀಡುತ್ತಿದ್ದಾರೆ. ಹಲವು ವಾಹನಗಳು ಮಾಲೀಕರ ಹೆಸರಿನಲ್ಲಿ ನೋಂದಣಿಯೇ ಇಲ್ಲ‌. ಅಪಘಾತಗಳು ನಡೆದರೆ ಯಾರು ಜವಾಬ್ದಾರಿ, ಇದನ್ನೆಲ್ಲೆ ನೋಡಿಕೊಂಡು ಸುಮ್ಮನಿರುವ ಪೊಲೀಸರಾದರೂ ಕ್ರಮ ಕೈಗೊಳ್ಳಬೇಕೆಲ್ಲವೇ’ ಎಂದು ಹೆಸರು ಹೇಳಲು ಬಯಸದ ವ್ಯಕ್ತಿಯೊಬ್ಬರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.