ಕೊಪ್ಪಳ: ‘ಬಿಜೆಪಿಯಿಂದ ಹಲವು ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುವ ಕಾಂಗ್ರೆಸ್ ಶಾಸಕ ರವಿ ಗಾಣಿಗ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ. ಇದೆಲ್ಲವೂ ಕಾಂಗ್ರೆಸ್ ನಾಟಕ ಕಂಪನಿಯ ಭಾಗ’ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್‌ನವರು ಉದ್ದೇಶಪೂರ್ವಕವಾಗಿಯೇ ತಮ್ಮ ಪಕ್ಷದವರಿಂದ ಈ ರೀತಿಯ ಹೇಳಿಕೆ ಕೊಡಿಸುತ್ತಿದ್ದಾರೆ. ಜನ ಹಾಗೂ ವಿರೋಧ ಪಕ್ಷದವರು ಬೇರೆ ವಿಷಯಗಳ ಬಗ್ಗೆ ಕೇಳಬಾರದು ಎನ್ನುವ ಕಾರಣಕ್ಕಾಗಿ ಹೀಗೆ ನಾಟಕ ಮಾಡುತ್ತಿದ್ದಾರೆ’ ಎಂದರು.
‘ಪಕ್ಷದ ವರಿಷ್ಠರು ವಿಜಯೇಂದ್ರ ಅವರಿಗೆ ಅವಕಾಶ ಕೊಟ್ಟಿದ್ದು ಖುಷಿ ನೀಡಿದೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅನೇಕ ಜನ ಆಕಾಂಕ್ಷಿಗಳಿದ್ದರು. ಇದು ಸಹಜವೂ ಹೌದು. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ನಮ್ಮೆಲ್ಲರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗಿಟ್ಟು ಪಕ್ಷ ಸಂಘಟನೆ ಮಾಡುತ್ತೇವೆ’ ಎಂದು ಹೇಳಿದರು.
‘ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳು ವಿಫಲವಾಗಿದ್ದು, ಇವುಗಳ ಬಗ್ಗೆ ಜನರಿಗೆ ನಂಬಿಕೆಯಿಲ್ಲ. ರಾಜ್ಯದಲ್ಲಿ ಬರಗಾಲ ಕಾಡುತ್ತಿರುವಾಗ ಮುಖ್ಯಮಂತ್ರಿ ತೆಲಂಗಾಣಕ್ಕೆ ಹೋಗಿ ಗ್ಯಾರಂಟಿ ಯೋಜನೆಗಳ ಮಾತನಾಡುತ್ತಿದ್ದಾರೆ. ಯಾವ ಮುಖವಿಟ್ಟುಕೊಂಡು ಅವರು ಈ ಕೆಲಸ ಮಾಡುತ್ತಾರೆ’ ಎಂದು ಪ್ರಶ್ನಿಸಿದರು.
ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಿರಾ ಎನ್ನುವ ಪ್ರಶ್ನೆಗೆ ‘ಸ್ಪರ್ಧೆ ಮಾಡುವುದಿಲ್ಲ. ಬಳ್ಳಾರಿ ಕ್ಷೇತ್ರದ ಈಗಿನ ಸಂಸದರು ಚೆನ್ನಾಗಿಯೇ ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.