ADVERTISEMENT

ಹೆಣ್ಣು ಮಗುವಿಗೆ ಸುಷ್ಮಾ ಸ್ವರಾಜ್‌ ಹೆಸರಿಡಲು ನಿರ್ಧರಿಸಿದ ಬಿಜೆಪಿ ಕಾರ್ಯಕರ್ತ

ಕಾರ್ಯಕ್ರಮಕ್ಕೆ ಸಚಿವ ಬಿ. ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿಯೇ ಬರಬೇಕು ಎಂದು ಪಟ್ಟು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 13:53 IST
Last Updated 6 ಆಗಸ್ಟ್ 2022, 13:53 IST
   

ಕಾರಟಗಿ: ಹತ್ತು ದಿನಗಳ ಹಿಂದೆ ಜನಿಸಿದ ಹೆಣ್ಣುಮಗುವಿಗೆ ಸುಷ್ಮಾ ಸ್ವರಾಜ್‌ ಎಂದು ನಾಮಕರಣ ಮಾಡಲು ಸಿದ್ಧವಾಗಿರುವ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತ, ಈ ಕಾರ್ಯಕ್ರಮಕ್ಕೆ ಸಚಿವ ಬಿ. ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿಯೇ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬದ ದಿನ ಸುಷ್ಮಾ ಸ್ವರಾಜ್‌ ಅವರು ಜನಾರ್ದನ ರೆಡ್ಡಿ ಅವರ ಮನೆಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಆಗಿನಿಂದಲೂ ತಾಲ್ಲೂಕಿನ ಮೈಲಾಪುರ ಗ್ರಾಮದ ದೇವರಾಜ ಶಿವಣ್ಣನವರ ಅವರು ಸುಷ್ಮಾ ಸ್ವರಾಜ್‌, ರಾಮುಲು ಮತ್ತು ರೆಡ್ಡಿ ಅವರ ಅಪ್ಪಟ ಅಭಿಮಾನಿ.

‘ಮೊದಲ ಮಗುವಿಗೆ ಸುಷ್ಮಾ ಸ್ವರಾಜ್‌ ಅವರ ಹೆಸರಿಡಲು ಯೋಚಿಸಿದ್ದೆ. ಮೊದಲ ಮಗು ಗಂಡಾಗಿದ್ದರಿಂದ ನನ್ನ ಆಸೆ ಈಡೇರಲಿಲ್ಲ. ಈಗ ಪತ್ನಿ ಬಸಮ್ಮ ಹೆಣ್ಣುಮಗುವಿಗೆ ಜನ್ಮನೀಡಿದ್ದಾಳೆ. ನನ್ನ ಆಸೆಯಿಂತೆ ಅವರ ಹೆಸರು ನಾಮಕರಣ ಮಾಡುವೆ. ಇದು ನನ್ನ ಕುಟುಂಬದವರ ತೀರ್ಮಾನವೂ ಹೌದು’ ಎನ್ನುತ್ತಾರೆ ದೇವರಾಜ.

ADVERTISEMENT

’ಸುಷ್ಮಾ ಸ್ವರಾಜ್‌ ಅವರು ಈಗಿಲ್ಲ. ಬದಲಾಗಿ ಅವರ ಮಾನಸ ಪುತ್ರರಾದ ರಾಮುಲು ಮತ್ತು ರೆಡ್ಡಿ ಅವರು ನಮ್ಮ ಮನೆಗೇ ಬಂದು ಮಗಳಿಗೆ ನಾಮಕರಣ ಮಾಡಬೇಕು. ಈ ವಿಷಯವನ್ನು ಅವರ ಆಪ್ತರ ಗಮನಕ್ಕೂ ತಂದಿದ್ದೇನೆ. ಎಷ್ಟೇ ತಡವಾದರೂ ಕಾಯುತ್ತೇನೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.