ಕುಷ್ಟಗಿ: ‘ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸಲು ಕಾರಣವಾಗುವ ರಕ್ತವನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ’ ಎಂದು ಮದ್ದಾನೇಶ್ವರ ಹಿರೇಮಠದ ಕರಿಬಸವ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಹಜರತ್ ಹೈದರಲಿ ನೌಜವಾನ್ ಸಮಿತಿ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ನಿಮಿತ್ತ ಕೊಪ್ಪಳದ ಸಂಜೀವಿನಿ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ 4ನೇ ವರ್ಷದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜದಲ್ಲಿ ಅನೇಕ ಜಾತಿ ಮತಗಳನ್ನು ಎಣಿಸುತ್ತೇವೆ. ಆದರೆ ಎಲ್ಲರ ರಕ್ತದ ಬಣ್ಣ ಒಂದೇ ಆಗಿದ್ದು ಜಾತಿ ಭೇದವಿಲ್ಲ. ತುರ್ತು ಅಗತ್ಯದ ಸಂದರ್ಭದಲ್ಲಿ ರಕ್ತ ಮುಖ್ಯವಾಗುತ್ತದೆಯೇ ಹೊರತು ಅದು ಯಾವ ಜಾತಿಯವರದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಸಮಾಜದಲ್ಲಿ ಎಲ್ಲ ಸಮುದಾಯಗಳ ಜನರು ಸಹೋದರತ್ವ, ಭ್ರಾತೃತ್ವದೊಂದಿಗೆ ಜೀವನ ನಡೆಸಬೇಕು, ಅದೇ ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶದ ಸಾರ ಆಗಿದೆ’ ಎಂದರು.
ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ, ಪುರಸಭೆ ಸದಸ್ಯ ಮೈನುದ್ದೀನ್ ಮುಲ್ಲಾ, ದೊಡ್ಡಬಸವನಗೌಡ ಬಯ್ಯಾಪುರ ಇತರರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಪ್ಪಳದ ಸಂಜೀವಿನಿ ರಕ್ತ ನಿಧಿ ಕೇಂದ್ರದ ಮೆಹಬೂಬ್, ಪುರಸಭೆ ಸದಸ್ಯರಾದ ಮಹಾಂತೇಶ ಕಲಭಾವಿ, ಮೆಹಮೂಬ ಕಮ್ಮಾರ, ಶಿಬಿರದ ಆಯೋಜಕರಾದ ಅಧ್ಯಕ್ಷ ರಾಜಾಸಾಬ್ ಮಾಟಲದಿನ್ನಿ, ಗೌರವ ಅಧ್ಯಕ್ಷ ಹುಸೇನ್ ಕಾಯಿಗಡ್ಡಿ, ಉಪಾಧ್ಯಕ್ಷ ಶಾಮೀದಸಾಬ್ ಯಲಬುರ್ಗಾ, ಮದರಭಾಷಾ ಭಾವಿಕಟ್ಟಿ, ಜಿಲಾನ್ ಕಾಯಿಗಡ್ಡಿ, ಕಾಶೀಂಸಾಬ್, ಸಯ್ಯದ್ ಮುರ್ತುಜಾ, ನಾಗರಾಜ ಹಜಾಳ, ಸೇರಿದಂತೆ ಅನೇಕ ಯುವಕರು, ಸಂಘಟನೆಯ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಸುಮಾರು 120ಕ್ಕೂ ಅಧಿಕ ಜನರು ಸ್ವಯಂ ಪ್ರೇರಣೆಯೊಂದಿಗೆ ರಕ್ತ ದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.