ADVERTISEMENT

ಕೊಪ್ಪಳ: ಬಜೆಟ್‌ನಲ್ಲಿ ಜಿಲ್ಲೆಯ ಜನರಿಗೆ ಸಿಹಿ–ಕಹಿ

ಪ್ರಮೋದ
Published 17 ಫೆಬ್ರುವರಿ 2024, 8:12 IST
Last Updated 17 ಫೆಬ್ರುವರಿ 2024, 8:12 IST
ಅಂಜನಾದ್ರಿ ಬೆಟ್ಟ
ಅಂಜನಾದ್ರಿ ಬೆಟ್ಟ   

ಕೊಪ್ಪಳ: ಹಲವು ವರ್ಷಗಳಿಂದ ಬಾಕಿ ಉಳಿದಿರುವ ಜಿಲ್ಲೆಯ ಮಹತ್ವದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತದೆ ಎನ್ನುವ ದೊಡ್ಡ ನಿರೀಕ್ಷೆ ಹುಸಿಯಾಗಿದೆ. 

ಬಹದ್ದೂರ್‌ ಬಂಡಿ ಏತ ನೀರಾವರಿ, ಅಳವಂಡಿ–ಬೆಟಗೇರಿ ಏತ ನೀರಾವರಿ, ಸಿಂಗಟಾಲೂರು ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ಲಭಿಸುತ್ತದೆ ಎನ್ನುವ ನಿರೀಕ್ಷೆ ಜಿಲ್ಲೆಯ ಜನರದ್ದಾಗಿತ್ತು. ಇದಕ್ಕಾಗಿ ಯಾವ ಅನುದಾನ ಘೋಷಿಸಿಲ್ಲ.

ಉತ್ತರ ಕರ್ನಾಟಕದ ಪ್ರಮುಖ ಕೃಷ್ಣಾ ಮೇಲ್ದಂಡೆ ಯೋಜನೆಯ ನ್ಯಾಯಾಧೀಕರಣ–2 ಅಂತಿಮ ತೀರ್ಪಿನ ಬಾಕಿಯಿರುವ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಜೊತೆಗೆ ಅಗತ್ಯ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದಷ್ಟೇ ಬಜೆಟ್‌ನಲ್ಲಿ ಹೇಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರತಿನಿಧಿಸುವ ಕ್ಷೇತ್ರದಲ್ಲಿರುವ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನೆಗೆ ₹15,600 ಕೋಟಿ ಮೊತ್ತದ ಡಿಪಿಆರ್‌ ಸಿದ್ಧಗೊಂಡಿದೆ. ಯೋಜನೆ ಅನುಷ್ಠಾನ ಸಂಬಂಧ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಚುನಾವಣಾ ಲೆಕ್ಕ: ರಾಜ್ಯ ಸರ್ಕಾರ ನೀರಾವರಿಗೆ ಆದ್ಯತೆ ನೀಡದಿದ್ದರೂ ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರದ ನಡೆಗೆ ಪ್ರತಿತಂತ್ರ ಹೆಣೆದಿದೆ.

2021ರಲ್ಲಿ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆದಾಗ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ನೀಡುವುದಾಗಿ ಹೇಳಿ ಮುಂದಿನ ಬಜೆಟ್‌ನಲ್ಲಿ ಈ ಮೊತ್ತ ಘೋಷಿಸಿದ್ದರು. ಬಿಜೆಪಿ ಅಯೋಧ್ಯೆಯಲ್ಲಿ ರಾಮನಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಿ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಇದಕ್ಕೆ ಪ್ರತಿತಂತ್ರ ಹೂಡಿರುವ ಕಾಂಗ್ರೆಸ್‌ ರಾಮನ ಬಂಟ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ನೀಡುವುದಾಗಿ ಘೋಷಿಸಿದೆ. ಬಿಜೆಪಿ ಸರ್ಕಾರ ಘೋಷಿಸಿದ್ದ ಹಣದಲ್ಲಿ ₹20 ಕೋಟಿ ಮೊತ್ತದ ಕಾಮಗಾರಿ ಮಾತ್ರ ಈಗ ಆರಂಭವಾಗಿದೆ. ಅನುದಾನ ಘೋಷಣೆ ಹಿಂದೆ ಎರಡೂ ಪಕ್ಷಗಳ ರಾಜಕೀಯ ಲೆಕ್ಕಾಚಾರಗಳಿವೆ ಎನ್ನುವ ಚರ್ಚೆ ಜಿಲ್ಲೆಯ ಜನರಲ್ಲಿ ನಡೆಯುತ್ತಿದೆ.

ಜೊತೆಗೆ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿದ್ದು ಜಿಲ್ಲೆಯ ಜನರ ಖುಷಿಗೆ ಕಾರಣವಾಗಿದೆ. ಹುಲಿಗೆಗೆ ಪ್ರತಿವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡಿದರೂ ಮೂಲ ಸೌಕರ್ಯಗಳ ಕೊರತೆಯಿದೆ. ಮುಜುರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಇತ್ತೀಚೆಗೆ ಹುಲಿಗೆಗೆ ಭೇಟಿ ನೀಡಿದಾಗ ಪ್ರಾಧಿಕಾರ ರಚನೆ ಬಗ್ಗೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದರು. ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಕ್ರಮ, ಕೌಶಲ ಅಭಿವೃದ್ಧಿ ಕೇಂದ್ರ ಹೀಗೆ ಹಲವು ಯೋಜನೆಗಳು ಘೋಷಣೆಯಾಗಿವೆ. ಯಲಬುರ್ಗಾದಲ್ಲಿ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣದ ಘೋಷಣೆ ಬಜೆಟ್‌ ಪೂರ್ವದಲ್ಲಿಯೇ ಆಗಿತ್ತು.

ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ನೋಟ

ಕೊಪ್ಪಳ ಜಿಲ್ಲೆಗೆ ಸಿಕ್ಕಿದ್ದೇನು?

* ಕೃಷಿ ಉತ್ಪನ್ನ ಸಂಸ್ಕರಣೆ ಮಾರುಕಟ್ಟೆ ಸಂಪರ್ಕ ಮತ್ತು ಮೌಲ್ಯವರ್ಧನೆಯಲ್ಲಿ ಸಹಕಾರ ವಲಯ ಪ್ರಮುಖ ಪಾತ್ರ ವಹಿಸಲಿರುವ ಹಿನ್ನೆಲೆಯಲ್ಲಿ ಕೃಷಿ ಮಾರಾಟ ಇಲಾಖೆ ಮೂಲಕ ಯಲಬುರ್ಗಾದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಶೀಥಲಗೃಹ (ಕೋಲ್ಡ್‌ ಸ್ಟೋರೇಜ್‌). ಯಲಬುರ್ಗಾ ಬಸವನಬಾಗೇವಾಡಿ ರಾಣೆಬೆನ್ನೂರು ಬಳ್ಳಾರಿ ಮತ್ತು ಗದಗ ಸೇರಿ ಒಟ್ಟು ₹50 ಕೋಟಿ ಮೀಸಲು.

* ಉತ್ತರ ಕರ್ನಾಟಕ ಪ್ರಸಿದ್ಧ ಧಾರ್ಮಿಕ ತಾಣ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ.

* ಯಲಬುರ್ಗಾ–ಕುಕನೂರು ತಾಲ್ಲೂಕಿನಲ್ಲಿ ₹970 ಕೋಟಿ ಅಂದಾಜು ವೆಚ್ಚದಲ್ಲಿ 38 ಕೆರೆಗಳನ್ನು ತುಂಬಿಸುವ ಯೋಜನೆ. ಇದು ಅಂತರ್ಜಲ ಹೆಚ್ಚಿಸಲು ಸಹಕಾರಿ. 

* ಕೆಕೆಆರ್‌ಡಿಬಿ ವತಿಯಿಂದ ವಿಶ್ವವಿದ್ಯಾಲಯ ಘಟಕ ಕಾಲೇಜುಗಳನ್ನು ಅಗತ್ಯವಿರುವ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆರಂಭಿಸಲು ಕ್ರಮ.

* 2025-26ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಪ್ರಾರಂಭಕ್ಕೆ ಕ್ರಮ.

* ಕುಕನೂರು ತಾಲ್ಲೂಕಿನ ತಳಕಲ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜಿಟಿಟಿಸಿ ಬಹುಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕ್ರಮ.

* ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) 450 ಹಾಸಿಗೆ ಆಸ್ಪತ್ರೆಗೆ ಉಪಕರಣ ಖರೀದಿಗಾಗಿ ₹75 ಕೋಟಿ.

* ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಹೊಸ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಅರಂಭಕ್ಕೆ ಕ್ರಮ. ಇದರ ಲಾಭ ಕೊಪ್ಪಳ ಜಿಲ್ಲೆಗೂ ಲಭಿಸಲಿದೆ.

* ಕೆಕೆಆರ್‌ಡಿಬಿ ಭಾಗದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ₹221 ಕೋಟಿ ವೆಚ್ಚದಲ್ಲಿ ಸ್ಥಾಪನೆಗೆ ಕ್ರಮ.

* ಕಲ್ಯಾಣ ಕರ್ನಾಟಕದಲ್ಲಿ ಹಿಮಫೋಲಿಯಾ ಮತ್ತು ಥಲಸ್ಸೆಮಿಯಾ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕೊರತೆಯಿರುವುದರಿಂದ ಕಲಬುರಗಿ ಹಾಗೂ ಕೊಪ್ಪಳದ ಐಸಿಡಿಟಿ ಕೇಂದ್ರಗಳ ಬಲವರ್ಧನೆಗೆ ₹7 ಕೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.