ADVERTISEMENT

ಕೊಪ್ಪಳ | ಗ್ರಾಮಕ್ಕೆ ಬಂದ ಬಸ್‌; ವಿದ್ಯಾರ್ಥಿಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 6:12 IST
Last Updated 25 ಜೂನ್ 2022, 6:12 IST
   

ಹನುಮಸಾಗರ (ಕೊಪ್ಪಳ): ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೋನಾಪೂರ ಹಾಗೂ ಪರಮನಹಟ್ಟಿ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಮರುದಿನವೇ ಗ್ರಾಮಕ್ಕೆ ಬಸ್‌ ಬಂದಿದ್ದು, ಇದು ವಿದ್ಯಾರ್ಥಿಗಳ ಸಂಭ್ರಮಕ್ಕೆ ಕಾರಣವಾಗಿದೆ.

50 ಪ್ರೌಢಶಾಲಾ ವಿದ್ಯಾರ್ಥಿಗಳು ಬಸ್‌ ಸೌಲಭ್ಯಕ್ಕಾಗಿ ಆಗ್ರಹಿಸಿ ಶುಕ್ರವಾರ ರಸ್ತೆಯಲ್ಲಿಯೇ ಕುಳಿತು ಓದಿ ಪ್ರತಿಭಟನೆ ಮಾಡಿದ್ದರು. ಬಸ್‌ ಸೌಲಭ್ಯದ ಕೊರತೆ ಕಾರಣ ಮಕ್ಕಳು ನಿತ್ಯ ನಾಲ್ಕು ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗಬೇಕಾಗಿತ್ತು. ಗ್ರಾಮಕ್ಕೆ ಶನಿವಾರ ಬೆಳಿಗ್ಗೆ ಬಸ್‌ ಬರುತ್ತಿದ್ದಂತೆ ಸಂಭ್ರಮಿಸಿ ಮಕ್ಕಳು ಪರಸ್ಪರ ಖುಷಿ ಹಂಚಿಕೊಂಡರು.

ಮುಳ್ಳುಕಂಟಿ ತೆರವು: ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಬಸ್‌ ಸಂಚಾರಕ್ಕೆ ಅಡ್ಡಿಯಾಗಿದ್ದ ಗಿಡಗಂಟಿ ತೆರವುಗೊಳಿಸುವುದಕ್ಕೂ ಹಾದಿ ಮಾಡಿಕೊಟ್ಟಿತು.

ADVERTISEMENT

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕುಷ್ಟಗಿ ಸಾರಿಗೆ ಘಟಕ್ಕೆ ಭೇಟಿ ನೀಡಿ, ಶನಿವಾರದಿಂದಲೇ ಆ ವಿದ್ಯಾರ್ಥಿಗಳು ಸಂಚರಿಸುವ ಗ್ರಾಮಗಳ ಮೂಲಕ ಬಸ್ ಸಂಚಾರ ಆರಂಭಿಸಬೇಕು ಹಾಗೂ ಶಾಲಾ ಮಕ್ಕಳು ಸಂಚರಿಸುವ ಎಲ್ಲ ಮಾರ್ಗಗಳ ಬಸ್‍ಗಳನ್ನು ಸರಿಯಾದ ಸಮಯಕ್ಕೆ ಓಡಿಸಬೇಕು ಎಂದು ಸೂಚಿಸಿದ್ದರು.

ರಸ್ತೆ ಅಕ್ಕಪಕ್ಕದಲ್ಲಿ ಮುಳ್ಳುಕಂಟಿ ಬೆಳೆದು ಬಸ್‌ಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಅವುಗಳನ್ನು ತೆರವುಗೊಳಿಸಿದ್ದು ಈಗ ಬಸ್‌ ಸಂಚಾರ ಆರಂಭವಾಗಿದೆ. ಮಕ್ಕಳ ಮೊಗದಲ್ಲಿ ನಗು ನಲಿದಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.