ADVERTISEMENT

ಆಮೆಗತಿ ಕಾಮಗಾರಿ: ಪ್ರಯಾಣಿಕರಿಗೆ ಕಿರಿಕಿರಿ

ಗಡುವು ಮುಗಿದರೂ ಮುಗಿಯದ ಕಾಮಗಾರಿ: ಹಳೆ ಕಾಂಪೌಂಡ್‌ಗೆ ಪ್ಲಾಸ್ಟರ್‌!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:54 IST
Last Updated 23 ಫೆಬ್ರುವರಿ 2020, 10:54 IST
ನಿರ್ಮಾಣ ಹಂತದ ಕುಕನೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
ನಿರ್ಮಾಣ ಹಂತದ ಕುಕನೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ   

ಕುಕನೂರು: ಪಟ್ಟಣದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಆಮೆಗತಿ­ಯಲ್ಲಿ ಸಾಗುತ್ತಿದೆ. ಇದರಿಂದ ಬಸ್‌ ನಿಲುಗಡೆಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಗಡುವು ಮುಗಿದಿದ್ದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ನೀಲನಕ್ಷೆ ಪ್ರಕಾರ ಕಾಮಗಾರಿ ನಡೆದಿಲ್ಲ. ಹಳೆ ಕಾಂಪೌಂಡ್‌ಗೆ ಪ್ಲಾಸ್ಟರ್ ಮಾಡಲಾಗಿದೆ. ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಶರಣಪ್ಪ ಚಲವಾದಿ ಆರೋಪಿಸುತ್ತಾರೆ.

ADVERTISEMENT

ಕಾಮಗಾರಿ ನಡೆಯುತ್ತಿರು­ವ ವೇಗ ಗಮನಿಸಿದರೆ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗ­ಬಹುದು. ಕಾಮಗಾರಿ ನಡೆದಿರುವ ಹಿನ್ನೆಲೆ­ಯಲ್ಲಿ ಬಸ್ ನಿಲುಗಡೆಗೆ ಸರಿ­ಯಾದ ವ್ಯವಸ್ಥೆ ಇಲ್ಲದಂತಾಗಿದೆ. ಗ್ರಾಮೀಣ ಮತ್ತು ನಗರಗಳಿಗೆ ಪ್ರಯಾಣಿಕ­ರನ್ನು ಕರೆದೊಯ್ಯುವ ಬಸ್‌ಗಳ ನಿಲುಗಡೆಗೆ ಸ್ಥಳ­ವಿಲ್ಲ. ಪ್ರಯಾ­ಣಿಕರು ನಿಲ್ದಾಣಕ್ಕೆ ಬರುವ ಪ್ರತಿ ಬಸ್‌ಗಳನ್ನು ಎಲ್ಲಿಗೆ ಹೋಗುತ್ತದೆ ಎಂದು ಓಡಿ­ಹೋಗಿ ನೋಡಬೇಕಾದ
ಸ್ಥಿತಿ ಇದೆ.

ಮಳೆಗಾಲದಲ್ಲಿ ನೀರು ನಿಲ್ದಾಣವನ್ನು ಸುತ್ತುವರಿಯುತ್ತದೆ. ಪ್ರಯಾಣಿಕರು ನೀರಿನಲ್ಲೇ ನಿಲ್ಲಬೇಕಾ­ಗುತ್ತದೆ. ಈಗ ಸುಡು ಬಿಸಿಲು, ಪ್ರಯಾಣಿಕರಿಗೆ ನಿಲ್ಲಲು ಸರಿಯಾದ ಸ್ಥಳ ವಿಲ್ಲ.

ಬಸ್‌ ನಿಲ್ದಾಣದ ಅವ್ಯವಸ್ಥೆ ಕುರಿತು ಮಾತ­ನಾಡಿದ ಪ್ರಯಾಣಿಕ ರಮೇಶ, ‘ಬಸ್‌ ನಿಲ್ದಾಣ ಕಾಮಗಾರಿ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಮುಗಿಯಲು ಇನ್ನೂ ಒಂದು ವರ್ಷ ಆಗಬಹುದು’ ಎಂದರು.

‘ನಿಲ್ದಾಣದಲ್ಲಿ ಕುಳಿತುಕೊಳ್ಳಲು ಆಗದಷ್ಟು ದೂಳು ಮೆತ್ತಿಕೊ­ಳ್ಳು­ತ್ತದೆ. ಉಸಿರಾಡಲು ಸಮಸ್ಯೆ­ಯಾಗುತ್ತಿದೆ. ಕುಡಿಯಲು ನೀರು ಸಿಗುತ್ತಿಲ್ಲ. ಎಲ್ಲೆಂದರಲ್ಲಿ ಗುಟ್ಕಾ, ಎಲೆ ಅಡಿಕೆ ತಿಂದು ಉಗಿಯಲಾಗಿದೆ. ನಿಲ್ದಾಣದ ಇಡೀ ವಾತಾವರಣ ನರಕ­ ಮಯವಾಗಿದೆ. ತಕ್ಷಣ ಶಾಸಕರು, ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು’ ಎಂದು ಅವರು
ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.