ಕಾರಟಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನಿಂದ ಮದ್ಯವರ್ಜನ ಶಿಬಿರ ಸೆ.29ರಿಂದ ಅ.6ರವರೆಗೆ 8 ದಿನಗಳವರೆಗೆ ಮದ್ಯವರ್ಜನ ಶಿಬಿರ ಪಟ್ಟಣದ ಕೆರೆಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಯೋಜನಾಧಿಕಾರಿ ನಿಂಗಪ್ಪ ಡಿ. ಅಗಸರ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಿ.ಎಚ್. ಶರಣಪ್ಪ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರನ್ನು ಆಹ್ವಾನಿಸಲಾಯಿತು. ಬಳಿಕ ಮಾತನಾಡಿದ ಸಚಿವರು, ‘8 ದಿನಗಳಲ್ಲಿ ಮದ್ಯ ವ್ಯಸನಿಗಳನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಮನಪರಿವರ್ತನೆ ಮಾಡುವುದರೊಂದಿಗೆ ಮದ್ಯದ ಚಟದಿಂದ ಮುಕ್ತರನ್ನಾಗಿಸಲಾಗುವುದು. ಕುಡಿತದ ದಾಸರಾದವರು ಸಮಾಜ, ಕುಟುಂಬ ನೆಮ್ಮದಿಯ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಯತ್ನದಿಂದ ಉತ್ತಮ ಮನುಷ್ಯರನ್ನು ಸೃಷ್ಟಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲಾಗುವುದು. ಶಿಬಿರದ ಸದುಪಯೋಗಕ್ಕೆ ವ್ಯಸನಿಗಳು ಮುಂದಾಗಬೇಕು’ ಎಂದು ಹೇಳಿದರು.
‘ಧರ್ಮಸ್ಥಳ ಸಂಸ್ಥೆಯು ರಾಜ್ಯದಾದ್ಯಂತ ಮದ್ಯವರ್ಜನ ಶಿಬಿರ ಆಯೋಜಿಸಿದೆ. 1. 36 ಲಕ್ಷ ಜನರು ಮದ್ಯದ ವ್ಯಸನದಿಂದ ಮುಕ್ತರಾಗಿ, ಸುಂದರ ಹಾಗೂ ಗೌರವಯುತ ಬದುಕು ಕಟ್ಟಿಕೊಂಡಿದ್ದಾರೆ’ ಎಂದರು.
ಸಮಿತಿ ಉಪಾಧ್ಯಕ್ಷೆ ಡಾ. ಶಿಲ್ಪಾ ಆನಂದಕುಮಾರ ದಿವಟರ ಪ್ರತಿಕ್ರಿಯಿಸಿ, ‘ಔಷಧ, ಮಾತ್ರೆ ಇಲ್ಲದೆ ಮನಸ್ಸು ಪರಿವರ್ತನೆ ಮಾಡುವುದರಿಂದ ವ್ಯಸನದಿಂದ ಮುಕ್ತರನ್ನಾಗಿಸಲಾಗುವುದು. ಮದ್ಯ ವ್ಯಸನಿಗಳು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು, ಸದ್ವಿನಿಯೋಗ ಮಾಡಿಕೊಳ್ಳಬೇಕು’ ಎಂದರು.
ಶಿಬಿರದ ವ್ಯವಸ್ಥಾಪನಾ ಸಮಿತಿ ರಮೇಶ ನಾಯಕ, ಶೀಲಾ, ಸಂತೋಷ, ಮಂಜುಳಾ, ದಿನೇಶ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.