ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ 44 ನೌಕರರು ಅವಿರೋಧವಾಗಿ ಕಾರ್ಯಕಾರಿ ನಿರ್ದೇಶಕರಾಗಿ ಆಯ್ಕೆಯಾದರೆ, ಇನ್ನುಳಿದ 21 ಸ್ಥಾನಗಳಲ್ಲಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ನಡುವೆ ಮತ ಗಳಿಕೆಗೆ ಕಸರತ್ತು ಜೋರಾಗಿದೆ.
ಒಟ್ಟು 65 ಕಾರ್ಯಕಾರಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತಿದ್ದು, ಈಗ ಉಳಿದ 21 ಸ್ಥಾನಗಳಿಗೆ 14 ಇಲಾಖೆಗಳಿಂದ 46 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 16ರಂದು ಮತದಾನ ನಡೆಯಲಿದೆ. ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾರ್ಯಕಾರಿ ಸಮಿತಿಯ ನೂತನ ನಿರ್ದೇಶಕರು ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ನೂತನ ಅಧ್ಯಕ್ಷರು ಸೇರಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಾರೆ.
ಶತಾಯು ಗತಾಯು ಈ ಬಾರಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರುವ ಸ್ಪರ್ಧೆಯಲ್ಲಿರುವ ನೌಕರರಲ್ಲಿ ಬಹಳಷ್ಟು ಜನ ತಮ್ಮ ಕರ್ತವ್ಯಕ್ಕೆ ರಜೆ ಹಾಕಿ ತಮ್ಮ ಇಲಾಖೆಯ ಮತದಾರರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಮನೆಮನೆಗೆ ಹೋಗಿ ಮತ ಕೇಳಿದರೆ, ಇನ್ನೂ ಕೆಲವರು ಕಚೇರಿಗೆ ತೆರಳಿ ನಮಗೇ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಒಟ್ಟು 3,174 ಮತದಾರರು ಇದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಏಳು ಸ್ಥಾನಗಳು ಇರುವ ಕಾರಣ ಅಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿಯೂ ಹೆಚ್ಚಿದೆ.
ಚುನಾವಣೆ ಘೋಷಣೆಯಾದ ದಿನದಿಂದಲೂ ವಿವಿಧ ಇಲಾಖೆಗಳ ನೌಕರರು ತಮ್ಮ ಆಪ್ತ ವಲಯದ ಸಹದ್ಯೋಗಿಗಳ ಸಹಕಾರದಿಂದಾಗಿ 44 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ಸ್ಥಾನಗಳಲ್ಲಿ ಅವಿರೋಧ ಆಯ್ಕೆ ಆಗುವುದು ನಿಶ್ಚಿತವೇ ಆಗಿತ್ತು. ಉಳಿದ ಸ್ಥಾನಗಳಿಗೆ ಸ್ಪರ್ಧೆ ಎದುರಾಗುವುದು ಮೊದಲೇ ತಿಳಿದಿದ್ದರಿಂದ ಆ ಸ್ಪರ್ಧೆ ಚುರುಕು ಪಡೆದುಕೊಂಡಿದೆ.
ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದರಿಂದ ಸ್ಪರ್ಧಾ ಕಣ ಸ್ಪಷ್ಟವಾಗಿದೆ. ತಮ್ಮ ಎದುರಾಳಿ ಯಾರು ಎನ್ನುವ ಮಾಹಿತಿಯೂ ನಿಚ್ಚಳವಾಗಿದೆ. ಮನೆಮನೆಗೆ ತೆರಳಿ ಮತ ಕೇಳುವ ಜೊತೆಗೆ ಕಷ್ಟಸುಖ ವಿಚಾರಿಸುವುದು, ಔಪಚಾರಿಕ ಮಾತುಗಳನ್ನಾಡುವ ಜೊತೆಗೆ ’ನಮಗೊಂದು ಅವಕಾಶ ಮಾಡಿಕೊಡಿ’ ಎನ್ನುವ ಬೇಡಿಕೆಯನ್ನೂ ಮುಂದಿಡುತ್ತಿದ್ದಾರೆ. ಮನೆಮನೆ ಬೇಟೆ ಒಂದೆಡೆಯಾದರೆ, ಇನ್ನೊಂದೆಡೆ ಕರಪತ್ರಗಳನ್ನು ಮುದ್ರಿಸಿ ಕೊಡುತ್ತಿದ್ದಾರೆ. ಇನ್ನು ಕೆಲವರು ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಪ್ರಚಾರ ಕಾರ್ಯ ಸುಲಭ ಮಾಡಿಕೊಳ್ಳುತ್ತಿರುವ ಚಿತ್ರಣ ಕಂಡುಬರುತ್ತಿದೆ.
ಶಿಕ್ಷಕರ ಕ್ಷೇತ್ರದ ಒಟ್ಟು ಆರು ಸ್ಥಾನಗಳಿಗೆ ಚುರುಕಿನ ಪೈಪೋಟಿ ಏರ್ಪಟ್ಟಿದ್ದು ಪ್ರಾಥಮಿಕ ವಿಭಾಗದ ಐದು ಸ್ಥಾನಗಳಿಗೆ ಹತ್ತು ಜನ ಹಾಗೂ ಪದವೀಧರ ಕ್ಷೇತ್ರದ ಒಂದು ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಕನ್ನಡ ವರ್ಣಮಾಲೆಗೆ ಅನುಗುಣವಾಗಿ ಹೆಸರುಗಳನ್ನು ಕ್ರಮವಾಗಿ ಬ್ಯಾಲೆಟ್ ಪೇಪರ್ ಮೇಲೆ ಮುದ್ರಿಸಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. 16ರಂದು ಮತದಾನ ನಡೆಯಲಿದೆ.
-ಗೋಪಾಲರಾವ್ ಮಾನ್ವಿ ಸಂಘದ ಜಿಲ್ಲಾ ಚುನಾವಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.