ADVERTISEMENT

ಕರವಸೂಲಿ ಪ್ರಗತಿಗೆ ಮಾಸಾಚರಣೆ ಜಾರಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 12:35 IST
Last Updated 25 ಡಿಸೆಂಬರ್ 2019, 12:35 IST
ಹಿರೇಸಿಂಧೋಗಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಕರವಸೂಲಾತಿ ಮಾಸಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು
ಹಿರೇಸಿಂಧೋಗಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಕರವಸೂಲಾತಿ ಮಾಸಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು   

ಕೊಪ್ಪಳ: ತಾಲ್ಲೂಕಿನ ಎಲ್ಲ 38 ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಕರವಸೂಲಿ ಮಾಸಾಚರಣೆ ಹಮ್ಮಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ವೆಂಕೋಬಪ್ಪ ಹೇಳಿದರು.

ತಾಲ್ಲೂಕಿನ ಹಿರೇಸಿಂಧೋಗಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಕರವಸೂಲಾತಿ ಮಾಸಾಚರಣೆ ಪ್ರಯುಕ್ತ ನಡೆದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಎಲ್ಲ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಕರವಸೂಲಿಗಾರರು ಡಿ. 19ರಿಂದ 2020ರ ಜ. 31ರ ವರೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಶೇ 100ರಷ್ಟು ಕರವಸೂಲಿ ಪ್ರಗತಿ ಸಾಧಿಸಲು ಕರವಸೂಲಿ ಮಾಸಾಚರಣೆ ಹಮ್ಮಿಕೊಳ್ಳಬೇಕು ಎಂದರು.

ADVERTISEMENT

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮನೆ ಮನೆ ಭೇಟಿ ಮತ್ತು ಜಾಥಾ ಕಾರ್ಯಕ್ರಮ ಮೂಲಕ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದ್ದು, ಅದರಂತೆ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ಕರವಸೂಲಿಗಾರರು ಪ್ರಗತಿ ಸಾಧಿಸಲು ಬೆಳಿಗ್ಗೆ 6.30ರಿಂದ ಮನೆ ಮನೆಗೆ ತೆರಳಿ ಕರವಸೂಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಸಹ ಸ್ಪಂದಿಸಿದ್ದು, ಗುರಿಯಂತೆ ಸಾಧನೆಯಾಗುವದು ಕಂಡು ಬರುತ್ತಿದೆ ಎಂದರು.

ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿಯ ಕರಪರಿಷ್ಕರಣೆ ಬಗ್ಗೆ ಮತ್ತು ಕರವಸೂಲಾತಿ ಬಗ್ಗೆ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದ್ದು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ತೆರಿಗೆ ವಿಧಿಸುವುದು, ತೆರಿಗೆ ಪರಿಷ್ಕರಿಸುವುದು ಮತ್ತು ತೆರಿಗೆ ವಸೂಲಿ ಮಾಡುವ ಸರ್ಕಾರದ ನಿಯಮ ಹಾಗೂ ಸುತ್ತೋಲೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳು ಅಭಿವೃದ್ದಿ ಹೊಂದಬೇಕಾದರೆ ಪಂಚಾಯಿತಿ ಹಣಕಾಸಿನಲ್ಲಿ ಸಧೃಡವಾಗಿರುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಶರಣಯ್ಯ ಸಸಿಮಠ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂದಿಗಾಲಪ್ಪ, ಕಾರ್ಯದರ್ಶಿ ಮಹೇಶ್ವರಯ್ಯ ಸಸಿಮಠ, ಕರವಸೂಲಿಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.