ಕೊಪ್ಪಳ: ‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿ ಕೇಂದ್ರ ಸ್ಥಾಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 15 ಕಡೆ ಖರೀದಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಯಿತು. ಕಡಲೆಗಳು ಖರೀದಿ ಕೇಂದ್ರಗಳಿಗೆ ತಾಲ್ಲೂಕುವಾರು ನೋಡಲ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸುವ ಕುರಿತು ಚರ್ಚೆ ನಡೆಯಿತು.
‘2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ, ಗುಣಮಟ್ಟದ ಕಡಲೆ ಬೆಳೆಗೆ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹5335 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ, ಹಿರೇಸಿಂಧೋಗಿ, ಕವಲೂರು, ಅಳವಂಡಿ ಮತ್ತು ಘಟ್ಟಿರಡ್ಡಿಹಾಳದಲ್ಲಿ, ಕನಕಗಿರಿ ತಾಲ್ಲೂಕಿನಲ್ಲಿ ನವಲಿ ಮತ್ತು ಕನಕಗಿರಿಯಲ್ಲಿ, ಕುಕನೂರು, ಯಲಬುರ್ಗಾ ತಾಲ್ಲೂಕಿನಲ್ಲಿ ಯಲಬುರ್ಗಾ, ಮುಧೋಳ, ಚಿಕ್ಕನಕೊಪ್ಪ, ಬನ್ನಿಕೊಪ್ಪ, ತೊಂಡಿಹಾಳ ಮತ್ತು ಕುಷ್ಟಗಿ ತಾಲ್ಲೂಕಿನ ಮೆಣೇದಾಳ ಮತ್ತು ಹನುಮಸಾಗರ ಸೇರಿ ಒಟ್ಟು 15 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ ‘ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ದರದಂತೆ ಗುಣಮಟ್ಟದ ಕಡಲೆಕಾಳು ಖರೀದಿ ಪ್ರಕ್ರಿಯೆಯನ್ನು ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ನಡೆಸಬೇಕು. ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ತೆರೆದು ಸಂಬಂಧಿಸಿದ ಸಂಸ್ಥೆಗಳ ಮೂಲಕ ನೋಂದಣಿ ಕಾರ್ಯ ಮತ್ತು ಖರೀದಿ ಪ್ರಕ್ರಿಯೆ ಬರುವ ಶನಿವಾರದೊಳಗೆ ಆರಂಭಿಸಬೇಕು’ ಎಂದು ಸೂಚಿಸಿದರು.
ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಕಾರ್ಯದರ್ಶಿ ಜಿ.ಎಂ. ಮರುಳಸಿದ್ಧಯ್ಯ, ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ವಿಶಾಲ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಬಿ.ತೋಟದ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ಧ ಹೊಸಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.