ಕೊಪ್ಪಳ: ಒಂದೆಡೆ ಭಾರತಕ್ಕೆ ದೊಡ್ಡ ಹೆಸರು ತಂದುಕೊಟ್ಟ ಚಂದ್ರಯಾನ–3 ಯಶಸ್ಸು ಬಿಂಬಿಸುವ ಕಲಾಕೃತಿ, ಇನ್ನೊಂದೆಡೆ ಅಲಂಕಾರಿಕ ಹೂಗಳಿಂದ ಸುಂದರಗೊಂಡ ಚಿಟ್ಟೆಯ ಕಲಾಕೃತಿ, ಹಲವು ಕಡೆ ಟೆರೆಸ್ ಗಾರ್ಡನ್ ಮತ್ತು ಕಿಚನ್ ಗಾರ್ಡನ್.
ಇವೆಲ್ಲವೂ ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿದ ಫಲಪುಷ್ಪ ಪ್ರದರ್ಶನದಲ್ಲಿ ಕಂಡು ಬರುವ ದೃಶ್ಯಗಳು. ಜ. 27ರಂದು ಆರಂಭಗೊಂಡ ಈ ಫಲಪುಷ್ಪ ಪ್ರದರ್ಶನ ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಮಕ್ಕಳು, ಯುವಕರು, ಮಹಿಳೆಯರು, ರೈತರು, ಗೃಹಿಣಿಯರು ಹೂಗಳನ್ನು ನೋಡಿ ಕಣ್ತುಂಬಿಕೊಳ್ಳುವುದು ಸಾಮಾನ್ಯವಾಗಿತ್ತು. ಇದರಿಂದ ಜಾತ್ರೆಯ ಸೊಬಗು ಇನ್ನಷ್ಟು ಹೆಚ್ಚಿಸಿದೆ.
ನಾನ ತಳಿಯ ಹೂಗಳಿಂದ ಮಾಡಿದ ಅಲಂಕಾರಿಕ ಕಲಾಕೃತಿಗಳು ಹಾಗೂ ಮಾದರಿಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕುವೆಂಪು, ಶಿವರಾಮ ಕಾರಂತ, ದ.ರಾ.ಬೇಂದ್ರೆ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಸೇರಿದಂತೆ ಅನೇಕ ಮಹನೀಯರ ಕಲಾಕೃತಿಗಳನ್ನು ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತನೆ ಮಾಡಲಾಗಿದೆ. ದಾಳಿಂಬೆ, ಕಲ್ಲಂಗಡಿ, ಬಾಳೆ, ಪಪ್ಪಾಯಿ, ದ್ರಾಕ್ಷಿ, ಅಂಜೂರ, ಚಿಕ್ಕು, ಗೋಡಂಬಿ ಸೇರಿದಂತೆ ವಿವಿಧ ರೀತಿಯ ಹಣ್ಣುಗಳು ಹಾಗೂ ಹೂ ಪ್ರದರ್ಶನಕ್ಕಿವೆ.
ವಿವಿಧ ಅಲಂಕಾರಿಕ ಹೂಗಳಿಂದ ಅಲಂಕರಿಸಿ ತಯಾರಿಸಿದ್ದ ಚಂದ್ರಯಾನ-03 ಹಾಗೂ ಚಿಟ್ಟೆಯ ಅಲಂಕಾರಿಕ ಕಲಾಕೃತಿ ಹಾಗೂ ಹೀಗೆ ಹೂಗಳು ಹಾಗೂ ಹಣ್ಣುಗಳಿಂದ ಅಲಂಕರಿಸಿದ ಹಾಗೂ ಕೆತ್ತನೆ ಮಾಡಿದ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯಿತು. ಫಲ ಪುಷ್ಪ ಪ್ರದರ್ಶನ ವೀಕ್ಷಣೆ ಮಾಡುವ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು.
ಅಡಿಗೆ ತೋಟ: ಮನೆಯ ಆವರಣದಲ್ಲಿ, ತಾರಸಿ ತೋಟ ಮಾಡುವವರಿಗೆ ಪ್ರೋತ್ಸಾಹಿಸಬೇಕು ಎನ್ನುವ ಕಾರಣಕ್ಕೆ ಈ ಅಂಶಗಳನ್ನುಟ್ಟಿಕೊಂಡು ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ. ಇರುವಷ್ಟೇ ಸೀಮಿತ ಜಾಗವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತೋಟ ಹೇಗೆ ನಿರ್ಮಿಸಬೇಕು ಎನ್ನುವುದನ್ನು ತೋರಿಸಲಾಗಿದೆ.
ಜ. 27ರಂದು ಆರಂಭವಾಗಿರುವ ಮೇಳ ತೋಟಗಾರಿಕಾ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ ಆಕರ್ಷಕ ಹೂವಿನ ಕಲಾಕೃತಿ ಮುಂದೆ ಸೆಲ್ಪಿ ಸಂಭ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.