ಕುಷ್ಟಗಿ: ತಾಲ್ಲೂಕಿನಲ್ಲಿ ಚೆಕ್‌ಡ್ಯಾಂ ನಿರ್ಮಾಣದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಥರ್ಡ್ ಪಾರ್ಟಿ ತಂಡದ ಅಧಿಕಾರಿಗಳು ಶುಕ್ರವಾರ ಚೆಕ್‌ಡ್ಯಾಂಗಳ ಭೌತಿಕ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಮೂರನೇ ಸ್ವತಂತ್ರ ತಂಡದ ಅಧಿಕಾರಿಗಳಾದ ಎಂ.ಕೆ.ಜಂತ್ಲಿ, ಕೆ.ಮಂಜುನಾಥ್, ಯೋಗೇಶ್, ಗುರುಲಿಂಗಸ್ವಾಮಿ ಇತರರು ಚೆಕ್‌ಡ್ಯಾಂಗಳ ನಿರ್ಮಾಣದ ಸ್ಥಳದ ಆಯ್ಕೆ, ಕಾಮಗಾರಿ ಗುಣಮಟ್ಟ, ನಿಗದಿತ ಅಳತೆ ಮತ್ತು ವಿನ್ಯಾಸ ಪರಿಶೀಲನೆ ನಡೆಸಿದರು.
ತಾಲ್ಲೂಕಿನಲ್ಲಿ 635 ಚೆಕ್‌ಡ್ಯಾಂಗಳು ನಿರ್ಮಾಣಗೊಂಡಿದ್ದು ಅವುಗಳನ್ನು ಸ್ವತಂತ್ರ ತಂಡ ಕೆಲ ತಿಂಗಳ ಹಿಂದೆಯೇ ಪರಿಶೀಲಿಸಿತ್ತು. ಆದರೆ ಲಾಕ್‌ಡೌನ್ ಮತ್ತಿತರೆ ಕಾರಣಗಳಿಂದಾಗಿ ಉಳಿದ ಸುಮಾರು ನೂರು ಚೆಕ್‌ಡ್ಯಾಂಗಳ ಭೌತಿಕ ಪರಿಶೀಲನೆ ನಡೆಸುವುದು ಬಾಕಿ ಉಳಿದಿತ್ತು. ಅವುಗಳನ್ನು ಈಗ ಪರಿಶೀಲಿಸಿ ಜಿಲ್ಲಾ ಪಂಚಾಯಿತಿಗೆ ತಂಡ ವರದಿ ಸಲ್ಲಿಸಲಿದೆ ಎಂದು ಗ್ರಾಮೀಣ ನೀರು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭರತಕುಮಾರ ತಿಳಿಸಿದರು.
ಚೆಕ್‌ಡ್ಯಾಂ ನಿರ್ಮಾಣದಲ್ಲಿ ನಿಗದಿತ ವಿನ್ಯಾಸ ಅನುಸರಿಸದಿರುವುದು, ಕಡಿಮೆ ಅಳತೆ, ಗುಣಮಟ್ಟದಲ್ಲಿ ದೋಷ ಇರುವುದು ಪರಿಶೀಲನೆ ವೇಳೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
11 ಚೆಕ್‌ಡ್ಯಾಂಗಳ ಪರಿಶೀಲನೆ ನಡೆಸಲಾಗಿದೆ. ಇನ್ನೂ ಒಂದೆರಡು ದಿನಗಳಲ್ಲಿ ಸೂಚಿಸಿರುವ ಎಲ್ಲ ಚೆಕ್‌ಡ್ಯಾಂಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಸ್ವತಂತ್ರ ತಂಡದ ಅಧಿಕಾರಿ ಎಂ.ಕೆ.ಜಂತ್ಲಿ ಹೇಳಿದರು.
ಪರಿಶೀಲನೆ ವೇಳೆ ಎಂಜಿನಿಯರ್‌ಗಳು ಇರಲಿಲ್ಲ. ಆದರೆ ಚೆಕ್‌ಡ್ಯಾಂ ಹಗರಣದಲ್ಲಿ ಸ್ವತಃ ಭಾಗಿಯಾಗಿರುವ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಬ್ಬರ ಪುತ್ರ ಸ್ವತಂತ್ರ ತಂಡದ ಅಧಿಕಾರಿಗಳೊಂದಿಗೆ ಹಾಜರಿದ್ದು ಚೆಕ್‌ಡ್ಯಾಂಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.