ADVERTISEMENT

ಕೊಪ್ಪಳ: ತಂದೆ ಸಾಲ ತೀರಲು ಮಗನಿಗೆ ಬೆತ್ತಲೆ ಪೂಜೆ!

ಪರಿಚಯಸ್ಥರಿಂದಲೇ ಕೃತ್ಯ, ಮೂವರ ವಿರುದ್ಧ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 9:25 IST
Last Updated 3 ಅಕ್ಟೋಬರ್ 2022, 9:25 IST
   

ಕೊಪ್ಪಳ: ಅಪ್ಪನ ಸಾಲ ತೀರಬೇಕಾದರೆ ನೀನು ಬೆತ್ತಲೆ ಪೂಜೆ ಮಾಡಬೇಕು. ಆಗ ನಿಮ್ಮಪ್ಪನಿಗೆ ಕೊಟ್ಟ ಸಾಲವನ್ನು ಯಾರೂ ವಾಪಸ್‌ ಕೇಳುವುದಿಲ್ಲ ಎಂದು ಬಾಲಕನೊಬ್ಬನನ್ನು ನಂಬಿಸಿದ ದುರುಳರು ಬಾಲಕನಿಗೆ ಬೆತ್ತಲೆ ಪೂಜೆ ಮಾಡಿಸಿದ ಘಟನೆ ಇತ್ತೀಚೆಗೆ ನಡೆದಿದೆ.

ಬಡತನದ ಬೇಗೆಯಿಂದ ಬಳಲುತ್ತಿದ್ದ ಬಾಲಕನನ್ನು ಪುಸಲಾಯಿಸಿ ಪರಿಚಯಸ್ಥರೇ ದ್ರೋಹ ಮಾಡಿದ್ದಾರೆ. ಸಮಸ್ಯೆಗೆ ಪರಿಹಾರ ನೀಡುತ್ತೇವೆಂದು ಬಾಲಕನಿಗೆ ನಂಬಿಸಿ ಬೆತ್ತಲೆ ಪೂಜೆ ಮಾಡಿಸಿ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದಾರೆ. ಆ ಬಾಲಕ ಕೊಪ್ಪಳ ತಾಲ್ಲೂಕಿನವರು. ಘಟನೆ ನಡೆದಿದ್ದು ಹುಬ್ಬಳ್ಳಿ ಸಮೀಪದ ತಿಮ್ಮಾಪುರ ಗ್ರಾಮದಲ್ಲಿ. ಈ ಕುರಿತು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ನೊಂದ ಬಾಲಕನ ತಂದೆ ಭಾನುವಾರ ರಾತ್ರಿ ದೂರು ನೀಡಿದ್ದಾರೆ.

ಕೃತ್ಯದಲ್ಲಿ ಭಾಗಿಯಾದ ಆರೋಪದಡಿ ಕೊಪ್ಪಳ ತಾಲ್ಲೂಕಿನ ಹಾಸಗಲ್‌ ಗ್ರಾಮದ ಶರಣಪ್ಪ ತಳವಾರ, ಗಂಗನಾಳ ಗ್ರಾಮದ ವಿರುಪನಗೌಡ ಮತ್ತು ಮೆತಗಲ್‌ ಗ್ರಾಮದ ಶರಣಪ್ಪ ಓಜನಹಳ್ಳಿ ಎಂಬುವರು ವಿರುದ್ಧ ದೂರು ದಾಖಲಾಗಿದೆ.

ADVERTISEMENT

ಎಫ್‌ಐಆರ್‌ನಲ್ಲಿ ಇರುವುದೇನು?:

ಇದೇ ವರ್ಷದ ಜೂನ್‌ 6ರಂದು ಮೂವರು ನನ್ನ ಮನೆಗೆ ಬಂದು ನಿನ್ನ ಮಗನನ್ನು ಕೆಲಸಕ್ಕೆ ಕಳುಹಿಸು. ಹುಬ್ಬಳ್ಳಿ ಹತ್ತಿರದ ಗ್ರಾಮವೊಂದರಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಕಾಮಗಾರಿಯ ಗುತ್ತಿಗೆ ಪಡೆದಿದ್ದೇವೆ. ಅಲ್ಲಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಒತ್ತಾಯ ಮಾಡಿದರು. ಆದ್ದರಿಂದ ಕಳುಹಿಸಿದ್ದೆ.

ಕೆಲಸ ಮಾಡುವಾಗ ನನ್ನ ಮಗ ಮನೆಯ ಆರ್ಥಿಕ ಕಷ್ಟವನ್ನು ಹಾಗೂ ನನಗೆ ಇರುವ ಸಾಲವನ್ನು ಕೆಲಸಕ್ಕೆ ಕರೆದುಕೊಂಡ ಹೋದವರ ಎದುರು ಹೇಳಿಕೊಂಡಿದ್ದ. ಇದನ್ನೇ ದುರುಪಯೋಗ ಪಡಿಸಿಕೊಂಡ ಅವರು ‘ನಿನಗೆ ಬೆತ್ತಲೆ ಪೂಜೆ ಮಾಡಿದರೆ ನಿಮ್ಮ ಅಪ್ಪನಿಗೆ ಕೊಟ್ಟ ಸಾಲವನ್ನು ಯಾರೂ ವಾಪಸ್‌ ಕೇಳುವುದಿಲ್ಲ. ಒಟ್ಟಿಗೆ ಶ್ರೀಮಂತರಾಗುತ್ತೀರಿ ಎಂದು ಪುಸಲಾಯಿಸಿ ಹುಬ್ಬಳ್ಳಿ ಸಮೀಪದ ತಿಮ್ಮಾಪುರ ಗ್ರಾಮದ ವಾಲ್ಮೀಕಿನ ಭವನದ ಕೊಠಡಿಯಲ್ಲಿ ಕೂಡಿ ಹಾಕಿ ಬೆತ್ತಲೆ ಮಾಡಿದ್ದಾರೆ. ಮೈ ಕೆಗೆ ವಿಭೂತಿ ಹಚ್ಚಿ, ಕೊರಳಲ್ಲಿ ಹೂವಿನ ಹಾರ ಹಾಕಿ ಪೂಜೆ ಮಾಡಿದ್ದಾರೆ. ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆದು ನಿಂಬೆಹಣ್ಣನ್ನು ಕತ್ತರಿಸಿ ನನ್ನ ಮಗನ ತಲೆಯ ಮೇಲೆ ರಸ ಹಿಂಡಿದ್ದಾರೆ. ಮರ್ಮಾಂಗಗಳನ್ನು ಮುಟ್ಟಿ ಅಸಹ್ಯ ಮಾಡಿ ವಿಡಿಯೊ ಮಾಡಿದ್ದಾರೆ ಎಂದು ನೊಂದ ಬಾಲಕನ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.

ಈ ವಿಷಯವನ್ನು ಯಾರ ಮುಂದಾದರೂ ಬಾಯಿಬಿಟ್ಟರೆ ನಿನ್ನ ಹಾಗೂ ನಿನ್ನ ತಂದೆಯನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಈ ಕುರಿತು ಐಟಿ ಕಾಯ್ದೆ, ಬಾಲ ನ್ಯಾಯ (ಮಕ್ಕಳ ಹಕ್ಕುಗಳ ಪೋಷಣೆ) ಕಾಯ್ದೆಯಡಿ ದೂರು ದಾಖಲಾಗಿದೆ.

ಆರೋಪಿಗಳ ಪತ್ತೆಗೆ ಎರಡು ತಂಡ: ಎಸ್‌ಪಿ

ಬಾಲಕನಿಂದ ಬೆತ್ತಲೆ ಪೂಜೆ ಮಾಡಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ತಿಳಿಸಿದರು.

ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ’ಘಟನೆ ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯಲ್ಲಿ ನಡೆದಿದೆ. ನೊಂದ ಬಾಲಕ ಕೊಪ್ಪಳ ತಾಲ್ಲೂಕಿನವರು. ಈಗಾಗಲೇ ಎಫ್‌ಐಆರ್‌ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ತಂಡಗಳ ಸದಸ್ಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.