ADVERTISEMENT

ಗ್ರಾಹಕರಿಗೆ ಹಸಿಮೆಣಸಿನಕಾಯಿ ಘಾಟು!

ಫಸಲಿನ ಕೊರತೆ ಕಾರಣ: ಒಂದು ಕೆ.ಜಿಗೆ. ₹120

​ಪ್ರಜಾವಾಣಿ ವಾರ್ತೆ
Published 15 ಮೇ 2024, 14:28 IST
Last Updated 15 ಮೇ 2024, 14:28 IST
ಹಸಿ ಮೆಣಸಿನಕಾಯಿ
ಹಸಿ ಮೆಣಸಿನಕಾಯಿ   

ಕೊಪ್ಪಳ: ಹಿಂದಿನ ಒಂದು ತಿಂಗಳಿನಿಂದ ಹಸಿ ಮೆಣಸಿನಕಾಯಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು ಬೆಲೆ ಸಾಕಷ್ಟು ಏರಿಕೆಯಾಗಿದೆ. ಇದರ ಪರಿಣಾಮ ಗ್ರಾಹಕರ ಮೇಲೂ ಆಗಿದೆ.

ಒಂದು ತಿಂಗಳ ಹಿಂದೆ ಪ್ರತಿ ಕೆ.ಜಿ. ಮೆಣಸಿನಕಾಯಿಗೆ ₹70ರಿಂದ ₹80 ಇತ್ತು. ಈಗ ಒಂದು ಕೆ.ಜಿ.ಗೆ ₹120 ಆಗಿದೆ. ಹೀಗಾಗಿ ಮೊದಲು ಅರ್ಧ ಕೆ.ಜಿ. ಖರೀದಿ ಮಾಡುತ್ತಿದ್ದ  ಗ್ರಾಹಕರು ಈಗ ಅದಕ್ಕಿಂತಲೂ ಕಡಿಮೆ ಖರೀದಿಸುತ್ತಿದ್ದಾರೆ. ಕಳೆದ ವಾರ ವಿಪರೀತ ಬಿಸಿಲು ಮತ್ತು ಈಗ ಉತ್ತಮ ಮಳೆಯಾಗುತ್ತಿರುವ ಕಾರಣ ಹೆಚ್ಚು ದಿನ ಸಂಗ್ರಹಿಸಿಟ್ಟರೆ ತರಕಾರಿ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ವ್ಯಾಪಾರಿಗಳು ಅಂದಿನ ದಿನದ ವ್ಯಾಪಾರಕ್ಕೆ ಎಷ್ಟು ಅಗತ್ಯವೊ ಅಷ್ಟನ್ನು ಮಾತ್ರ ಸಗಟು ಮಾರುಕಟ್ಟೆಯಾದ ಎಪಿಎಂಸಿಯಲ್ಲಿ ಖರೀದಿಸುತ್ತಿದ್ದಾರೆ.

ಅತಿಯಾಗಿ ಖಾರ ಇರುವ ಗುಂಟೂರು ಮತ್ತು ಮಧ್ಯಮ ಖಾರವಿರುವ ಕಡ್ಗಾಯಿ ಮೆಣಸಿನಕಾಯಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸಿಗುತ್ತದೆ. ಇಲ್ಲಿನ ಲೇಬರ್‌ ವೃತ್ತ, ಜವಾಹರ ರಸ್ತೆಯ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳಲ್ಲಿಯೂ ಗ್ರಾಹಕರಿಗೆ ಮೆಣಸಿನಕಾಯಿ ಬೆಲೆ ಏರಿಕೆಯ ಘಾಟು ತಗುಲಿತ್ತು.

ADVERTISEMENT

‘ನಿತ್ಯದ ಅಡುಗೆಗೆ ಹಸಿ ಮೆಣಸಿನಕಾಯಿ ಅಗತ್ಯವಾಗಿ ಬೇಕೇ ಬೇಕು. ಮೊದಲು ಅರ್ಧ ಕೆ.ಜಿ. ಖರೀದಿ ಮಾಡುತ್ತಿದ್ದೆ. ಈಗ ಬೆಲೆ ವಿಪರೀತ ಏರಿಕೆಯಾಗಿರುವುದರಿಂದ ಕಡಿಮೆ ಖರೀದಿ ಮಾಡಿದ್ದೇನೆ. ಮುಂದೆಯೂ ಇದೇ ಸ್ಥಿತಿಯಾದರೆ ಖಾರದ ಪುಡಿ ಬಳಸಿ ಅಡುಗೆ ತಯಾರಿಸುವುದು ಅನಿವಾರ್ಯವಾಗುತ್ತದೆ’ ಎಂದು ನಗರದ ಗೃಹಿಣಿ ಅನುಸೂಯಾ ಎಸ್‌.ಎಂ. ಹೇಳಿದರು.

ಇನ್ನುಳಿದಂತೆ ಒಂದು ಕೆ.ಜಿ.ಗೆ ಟೊಮೆಟೊ (₹30), ಹೀರೇಕಾಯಿ (₹60), ಸೌತೇಕಾಯಿ (₹60) ಬೆಲೆ ಎಂದಿನಂತಿದೆ. ₹10ಕ್ಕೆ ಎರಡು ಕಟ್ಟು ನೀಡುತ್ತಿದ್ದ ಮೆಂತೆ, ಹುಣಸಿಕ್‌ ಸೊಪ್ಪು ಈಗ ಒಂದು ನೀಡಲಾಗುತ್ತಿದೆ.

ಒಂದು ತಿಂಗಳಿನ ಹಿಂದೆಯೇ ಏರಿಕೆಯಾಗಿರುವ ಹಸಿಮೆಣಸಿನಕಾಯಿ ಬೆಲೆ ಈಗಲೂ ಕಡಿಮೆಯಾಗಿಲ್ಲ. ಆದ್ದರಿಂದ ಖರೀದಿ ಮಾಡುವವರ ಪ್ರಮಾಣವೂ ಕಡಿಮೆಯಾಗಿದೆ.
ಮಂಜುನಾಥ ತರಕಾರಿ ವ್ಯಾಪಾರಿ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.