ADVERTISEMENT

ಹುಲಿಹೈದರ ಗ್ರಾಮದಲ್ಲಿ ಘರ್ಷಣೆ| ಬಂಧನ ಭೀತಿಯಿಂದ ಊರು ತೊರೆದ ಗ್ರಾಮಸ್ಥರು!

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 13:05 IST
Last Updated 12 ಆಗಸ್ಟ್ 2022, 13:05 IST
ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದ ರಸ್ತೆ ಗುರುವಾರ ಬಿಕೋ ಎನ್ನುತ್ತಿರುವುದು
ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದ ರಸ್ತೆ ಗುರುವಾರ ಬಿಕೋ ಎನ್ನುತ್ತಿರುವುದು   

ಕನಕಗಿರಿ (ಕೊಪ್ಪಳ): ತಾಲ್ಲೂಕಿನ ಹುಲಿಹೈದರದಲ್ಲಿ ಗುರುವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

ಘಟನೆಯಲ್ಲಿ ಇಬ್ಬರು ಮೃತಪಟ್ಟು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಶುಕ್ರವಾರವೂ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದರು.

ಗ್ರಾಮದಲ್ಲಿ ಸಂಪೂರ್ಣವಾಗಿ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಆದರೆ, ವೃದ್ದರು, ಮಹಿಳೆಯರು ಹೊರತು ಪಡಿಸಿ ಬಹುತೇಕ ಮನೆಗಳ ಹಿರಿಯರು ಬಂಧನದ ಭೀತಿಯಿಂದ ಊರು ತೊರೆದಿದ್ದಾರೆ.

ADVERTISEMENT

ಗ್ರಾಮದಲ್ಲಿ ಅಘೋಷಿತ ಬಂದ್‌ ವಾತಾವಾರಣ ನಿರ್ಮಾಣವಾಗಿದ್ದು, ಹೋಟೆಲ್, ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ಎಸ್‌ಬಿಐ ಬ್ಯಾಂಕ್‌ನಲ್ಲಿ ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಇದ್ದರು.

ಶಾಲೆಗೆ ಹೋಗುವ ಮಕ್ಕಳ ಪಾಲಕರು ಕೂಡ ಕುಟುಂಬ ಸಮೇತ ಊರು ತೊರೆದ ಹಿನ್ನೆಲೆಯಲ್ಲಿ ಗ್ರಾಮದ ಯಾವುದೇ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಂಡು ಬರಲಿಲ್ಲ. ಶಿಕ್ಷಕರು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಿದ್ದತೆಯ ಕೆಲಸದಲ್ಲಿ ತೊಡಗಿಕೊಂಡಿದ್ದು ಕಂಡು ಬಂತು.

ಅಲ್ಲಲ್ಲಿ ಆಯಾ ಓಣಿಯ ಕೆಲ ಮಹಿಳೆಯರು ನಶಿಪುಡಿ ತಿಕ್ಕುತ್ತಾ ಮನೆಯ ಅಂಗಳದಲ್ಲಿ ಎಂದಿನಂತೆ ಒಂದೆಡೆ ಕುಳಿತು ಮಾತನಾಡುತ್ತಿರುವುದು ಕಂಡುಬಂತು.

‘ನಾವು ನಿತ್ಯ ಪಕ್ಕದ ಲಾಯದುಣಸಿ ಗ್ರಾಮದ ಸೀಮೆಯ ಹೊಲಗಳಲ್ಲಿ ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ ಹೋಗುತ್ತೇವೆ. ದಿನಕ್ಕೆ ₹170 ರೂಪಾಯಿ ಕೂಲಿ ಕೊಡುತ್ತಾರೆ. ಊರಲ್ಲಿ ನಡೆದ ಘಟನೆ ಬಗ್ಗೆ ನಮಗೆ ಹೆಚ್ಚು ಏನೂ ತಿಳಿದಿಲ್ಲ. ಆ ಘಟನೆ ಬಗ್ಗೆ ನಮ್ಮ ಬಳಿ ಮಾತನಾಡಬೇಡಿ‘ ಎಂದು ಹೆಸರು ಹೇಳದೆ ಕೆಲ ಮಹಿಳೆಯರು ಮನೆಗೆ ತೆರಳಿದರು.

ಈಶಾನ್ಯ ವಲಯದ ಐಜಿಪಿ ಮನೀಷ್ ಖರ್ಬೀಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹುಲಿಹೈದರ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮೂರು ಗಂಟೆಗೂ ಹೆಚ್ಚಿನ ಸಮಯದಲ್ಲಿ ಹಾಜರಿದ್ದು ಬಂದೋಬಸ್ತ್‌ ಪರಿಶೀಲಿಸಿದರು. ಕೆಲವರಿಂದ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.