ADVERTISEMENT

ಗಂಗಾವತಿ: ನೀರು ಬಿಡುವ ಮೊದಲೇ ನಡೆಯದ ಸ್ವಚ್ಛತೆ

ಜಲಾಶಯದಿಂದ ನೀರು ಹರಿಯುವ ಮಾರ್ಗದ ಹಲವು ಕಾಲುವೆಗಳಲ್ಲಿ ತುಂಬಿದ ಕಸ

ಗುರುರಾಜ ಅಂಗಡಿ
ಎನ್.ವಿಜಯ್
Published 19 ಜುಲೈ 2024, 5:19 IST
Last Updated 19 ಜುಲೈ 2024, 5:19 IST
ಮುನಿರಾಬಾದ್ ಸಮೀಪ ಹಿಟ್ನಾಳ ಗ್ರಾಮದ ಟೋಲ್ ಗೇಟ್ ಹತ್ತಿರ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯಲ್ಲಿ ಕಸ ಬೆಳೆದಿರುವುದು
ಮುನಿರಾಬಾದ್ ಸಮೀಪ ಹಿಟ್ನಾಳ ಗ್ರಾಮದ ಟೋಲ್ ಗೇಟ್ ಹತ್ತಿರ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯಲ್ಲಿ ಕಸ ಬೆಳೆದಿರುವುದು   

ಗಂಗಾವತಿ: ಕಳೆದ ವರ್ಷ ತೀವ್ರ ಬರಗಾಲದಿಂದ ಬಳಲಿದ್ದ ಜಿಲ್ಲೆಯ ರೈತರ ಮೊಗದಲ್ಲಿ ಈ ವರ್ಷ ಖುಷಿ ಮೂಡಿದ್ದು, ತುಂಗಭದ್ರಾ ಜಲಾಶಯದಿಂದ ನೀರು ಹರಿಸಲು ತೀರ್ಮಾನಿಸಲಾಗಿದೆ. ಆದರೆ, ನೀರು ಹರಿಯುವ ಕಾಲುವೆಗಳನ್ನೇ ಸ್ವಚ್ಛಗೊಳಿಸಿಲ್ಲ.

ಕಾಲುವೆ ಹರಿಯುವ ಮಾರ್ಗದ ಬಹಳಷ್ಟು ಕಡೆ ಕಾಲುವೆಗೆ ಆಕ್ರಮವಾಗಿ ಅಳವಡಿಸಿದ ಪಂಪ್‌ಸೆಟ್‌, ಕೊಳವೆಗಳ ಮೂಲಕ ರೈತರು ತಮ್ಮ ಜಮೀನುಗಳಿಗೆ ನೀರು ಅನಧಿಕೃತವಾಗಿ ಪಡೆದುಕೊಳ್ಳುವುದು ಗುಟ್ಟಾಗಿ ಉಳಿದಿಲ್ಲ. ಇದರಿಂದಾಗಿ ರಾಯಚೂರು ಜಿಲ್ಲೆಯ ರೈತರು ಪ್ರತಿಭಟನೆ ನಡೆಸುವುದು, ವಾಗ್ವಾದ ಮಾಡುವುದು ಪ್ರತಿವರ್ಷವೂ ಸಾಮಾನ್ಯವಾಗಿದೆ.

ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನಿಂದ ಕನಕಗಿರಿ ವಿಧಾನಸಭಾ ಕ್ಷೇತ್ರದ ಚಿಕ್ಕಡಂಕನಕಲ್ ಗ್ರಾಮದವರೆಗೆ ಕಾಲುವೆ ಪಕ್ಕದಲ್ಲಿರುವ ಜಮೀನುಗಳಲ್ಲಿ ಕೊಳವೆ ಅಳವಡಿಸುವುದು ಸಾಮಾನ್ಯವಾಗಿದೆ. ಜಲಾಶಯದಿಂದ ನೀರು ಹರಿಸುವ ಮೊದಲು ಕಾಲುವೆಗಳಲ್ಲಿ ತುಂಬಿದ್ದ ಕಸವನ್ನು ಸ್ವಚ್ಛಗೊಳಿಸುವುದು ಮತ್ತು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕಿತ್ತು. ರೈತರ ಅನುಕೂಲಕ್ಕಾಗಿ ಐಸಿಸಿ ಸಭೆ ನಡೆಸಲು ತೀರ್ಮಾನಿಸಿದ್ದರೂ ಮೊದಲೇ ತಯಾರಿ ಮಾಡಿಕೊಂಡು ಕಾಲುವೆ ತ್ಯಾಜ್ಯ ತೆರವು ಮಾಡಿದ್ದರೆ ವೇಗವಾಗಿ ಕೊನೆಯ ಭಾಗದ ರೈತರಿಗೂ ವೇಗವಾಗಿ ನೀರು ಲಭಿಸುತ್ತಿತ್ತು ಎಂದು ರೈತರು ಹೇಳಿದರು.

ADVERTISEMENT

ತುಂಗಾಭದ್ರ ಎಡದಂಡೆ ಕಾಲುವೆ ವ್ಯಾಪ್ತಿಗೆ ಬರುವ ವಿಜಯನಗರ ಕಾಲದ ಉಪಕಾಲುವೆಗಳ ಆಧುನೀಕರಣ ಕಾಮಗಾರಿ ಕಾಲುವೆ ಮಧ್ಯದಲ್ಲಿ ಗಿಡಗಂಟಿ, ಹುಲ್ಲು ಬೆಳೆದು ಸರಾಗವಾಗಿ ನೀರು ಹರಿಯಲು ಅನುಕೂಲವಿಲ್ಲದಂತಾಗಿದೆ. ಸಾಣಾಪುರ ಗ್ರಾಮದಿಂದ ಸಂಗಾಪುರದವರೆಗೆ ಆಧುನೀಕರಣ ಕಾಮಗಾರಿ ಮುಗಿಸಿದ್ದು, ಇದರಲ್ಲಿ ಕಿಷ್ಕಿಂದಾ, ಅಂಜನಾದ್ರಿ, ಚಿಕ್ಕರಾಂಪುರ, ರಾಂಪುರ, ಬಸವನದುರ್ಗಾ ಗ್ರಾಮದ ಬಳಿ ಕೆಲವಡೆ ಅಪೂರ್ಣ ಕಾಮಗಾರಿ ಮಾಡಿದರೆ, ಇನ್ನೂ ಕೆಲವಡೆ ಕಾಲುವೆ ವಿಸ್ತೀರ್ಣ ಏರುಪೇರು ಮಾಡಲಾಗಿದೆ. ಇದರಿಂದ ಕಾಲುವೆ ರೂಪುರೇಷೆ ಬದಲಾಗಿ ನೀರು ಹರಿಯುವಿಕೆ ಪ್ರಮಾಣದ ಮೇಲೆಯೂ ಪರಿಣಾಮ ಬೀರುತ್ತಿದೆ.

ಮುನಿರಾಬಾದ್‌ ವರದಿ: ಮುಖ್ಯ ಕಾಲುವೆಯಿಂದ ವಿತರಣಾ ಕಾಲುವೆ ಮೂಲಕ ಗದ್ದೆಗಳಿಗೆ ನೀರು ಹರಿಯಬೇಕು. ಆದರೆ ಹಲವು ಕಡೆ ವಿತರಣಾ ಕಾಲುವೆಗಳು ನಿರ್ವಹಣೆ ಕಾಣದೆ ಕಸದಿಂದ ತುಂಬಿಕೊಂಡಿವೆ. ಜಲಾಶಯ ವ್ಯಾಪ್ತಿಯ ಎಡದಂಡೆ ಮೇಲ್ಮಟ್ಟದ ಕಾಲುವೆ ಮುನಿರಾಬಾದ್, ಹೊಸಹಳ್ಳಿ, ಹಿಟ್ನಾಳ, ಬೇವಿನಹಳ್ಳಿ, ಲಿಂಗದಹಳ್ಳಿ ಹಾಗೂ ಶಹಾಪುರ ಗ್ರಾಮಗಳ ರೈತರಿಗೆ ನೀರು ತಲುಪಿಸುತ್ತದೆ.

ಆದರೆ ಕಾಲುವೆಯಲ್ಲಿ ತುಂಬಿದ ಕಸ, ಕಳೆ ಸಸ್ಯ ತೆಗೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ವಿತರಣಾ ಕಾಲುವೆಯಿಂದ ಜಮೀನುಗಳಿಗೆ ನೀರು ಹರಿಸಲು ಮಡಿ ವ್ಯವಸ್ಥೆಯಿದ್ದು, ನೀರಿನ ಹರಿವು ನಿಯಂತ್ರಣ ಮಾಡುವ ವ್ಯವಸ್ಥೆ ಹಲವು ಕಡೆ ಹಾಳಾಗಿದೆ ಎನ್ನುವುದು ರೈತರ ಆರೋಪ. ಇದರಿಂದಾಗಿ ಕೆಲವು ಕಡೆ ಅನಿಯಮಿತ ನೀರು ಹರಿದು ವ್ಯರ್ಥವಾಗುತ್ತಿದ್ದರೆ, ಇನ್ನು ಕೆಲವು ಕಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪದೇ ರೈತರು ಪ್ರತಿ ವರ್ಷ ಪರದಾಡುವುದು ಸಾಮಾನ್ಯವಾಗಿದೆ.

ಗಂಗಾವತಿ ತಾಲ್ಲೂಕಿನ ವಿರೂಪಾಪುರ ಗಡ್ಡೆ ಬಳಿ ಕಿಷ್ಕಿಂದಾಕ್ಕೆ ತೆರಳುವ ಮಾರ್ಗದಲ್ಲಿನ ವಿಜಯನಗರ ಉಪಕಾಲುವೆ ಮಧ್ಯದಲ್ಲಿ ಹುಲ್ಲು ಬೆಳೆದಿರುವುದು
ಕಾರಟಗಿಯಲ್ಲಿಯ ತುಂಗಭದ್ರಾ ವಿತರಣಾ ನಾಲೆಯಲ್ಲಿ ತ್ಯಾಜ್ಯ ಸಂಗ್ರಹ
ಕಾಲುವೆಗಳಲ್ಲಿರುವ ಕಸ ತೆಗೆಯುವುದು ನಿರಂತರ ಪ್ರಕ್ರಿಯೆ. ಪ್ರಸ್ತುತ ನೀರು ಸರಾಗವಾಗಿ ಹರಿಯಲು ತೊಂದರೆ ಇರುವ ಕಾಲುವೆ ಇಲ್ಲ. ಸಣ್ಣ ದುರಸ್ತಿಗಳು ಇದ್ದರೆ ಮಾಡಲಾಗುವುದು.
ಎಂ.ಎಸ್.ಗೋಡೆಕಾರ್ ಕಾರ್ಯನಿರ್ವಾಹಕ ಎಂಜಿನಿಯರ್‌

ಕಾಲುವೆಗಳ ನಿರ್ವಹಣೆಗೆ ಅಲ್ಪ ಅನುದಾನ

-ಕೆ. ಮಲ್ಲಿಕಾರ್ಜುನ

ಕಾರಟಗಿ: ತುಂಗಭದ್ರಾ ಎಡದಂಡೆ ಮುಖ್ಯನಾಲೆಯಲ್ಲಿ ಈ ವರ್ಷ ಕಾಮಗಾರಿ ಕೈಗೊಂಡಿಲ್ಲ. ಕಾಮಗಾರಿಗೂ ಇರುವ ಅನುದಾನವೂ ಕಡಿಮೆ. ಇಲ್ಲಿಯ ಜಲಸಂಪನ್ಮೂಲ ಇಲಾಖೆಯ 31ನೇ ಉಪ ಕಾಲುವೆ ಮತ್ತು ನಂ 2 ಕಾಲುವೆ ಉಪ ವಿಭಾಗ ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯನಾಲೆಯ ಮೈಲ್‌ 27ರಿಂದ 34ರವರೆಗೆ ಬರುತ್ತದೆ. ಇದೇ ವ್ಯಾಪ್ತಿಯ ಸೋಮನಾಳ ಬಳಿ ನಾಲೆ ಬಿರುಕು ಸೋರಿಕೆ ಒಡೆದ ಪ್ರಸಂಗಗಳು ಅನೇಕ ಬಾರಿ ನಡೆದಿವೆ. ಸರ್ಕಾರ ಅಪಾಯದ ವಲಯದ ಪ್ರದೇಶಕ್ಕೆ ಅನುದಾನ ನೀಡಿಲ್ಲ ಯಾವುದೇ ಕಾಮಗಾರಿ ಕೈಗೊಂಡಿಲ್ಲ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ. ವಿತರಣಾ ನಾಲೆಯಲ್ಲಿ ಮುಳ್ಳಿನ ಗಿಡ ಕತ್ತರಿಸುವುದು ತೂಬುಗಳ ದುರಸ್ತಿಗೆಂದು ಎರಡೂ ಕಚೇರಿಗಳ ಮಧ್ಯೆ ಅಂದಾಜು ₹80ಲಕ್ಷ ಅನುದಾನ ನೀಡಲಾಗಿದೆ. ಇದು ಯಾತಕ್ಕೂ ಸಾಲುವುದಿಲ್ಲ ಎಂದು ರೈತರು ಹೇಳುತ್ತಾರೆ. ನೀರು ಬಿಟ್ಟಾಗಲೇ ನಾಲೆಯ ಪರಿಸ್ಥಿತಿ ಹೇಗಿರುತ್ತದೆ ಎಂದು ಬಹಿರಂಗವಾಗುತ್ತದೆ. ಈ ಭಾಗದ ಮುಖ್ಯನಾಲೆಯಲ್ಲಿ ಸಮಸ್ಯೆ ಕಾಣಿಸಿಕೊಂಡರೆ ರಾಯಚೂರು ಭಾಗದವರೆಗೆ ಅದರ ಪರಿಣಾಮ ಬೀರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.