ADVERTISEMENT

ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ ಸಾಧ್ಯ: ಹೇಮಲತಾ

ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ: ಪರಿಷತ್‌ ಸದಸ್ಯೆ ಹೇಮಲತಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 6:52 IST
Last Updated 21 ಜನವರಿ 2024, 6:52 IST
ಕೊಪ್ಪಳದಲ್ಲಿ ಶನಿವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಉದ್ಘಾಟಿಸಿದರು
ಕೊಪ್ಪಳದಲ್ಲಿ ಶನಿವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಉದ್ಘಾಟಿಸಿದರು   

ಕೊಪ್ಪಳ: ‘ಪಾರಂಪರಿಕ ವೃತ್ತಿಯೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಮಾತ್ರ ಸಮುದಾಯವನ್ನು ಅಭಿವೃದ್ಧಿಗೊಳಿಸಲು ಸಾಧ್ಯ’ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.

ಶನಿವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಪ್ರತಿ ಸಮುದಾಯವೂ ತನ್ನದೇ ಆದ ಪಾರಂಪರಿಕ ವೃತ್ತಿ, ಕುಲಕಸುಬು ಹೊಂದಿದೆ. ಆದರೆ, ಪ್ರಸ್ತುತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸಮುದಾಯದ ಪ್ರತಿ ವ್ಯಕ್ತಿಯೂ ಶಿಕ್ಷಣವಂತನಾಗಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ. ಇದನ್ನು ಬಳಸಿಕೊಂಡು ಪಾರಂಪರಿಕ ವೃತ್ತಿ, ಕಲೆಗೆ ಹೊಸ ರೂಪ ನೀಡಬಹುದು’ ಎಂದು ಹೇಳಿದರು.

ಗಜೇಂದ್ರಗಡದ ಎಸ್.ಎಸ್.ಭೂಮರೆಡ್ಡಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಅರವಿಂದ ಎಸ್.ವಡ್ಡರ್ ಮಾತನಾಡಿ, ‘ಸಿದ್ಧರಾಮೇಶ್ವರರರು ಸ್ವಭಾವತಃ ಮುಗ್ಧರಾಗಿದ್ದರೂ ಸ್ವಾಭಿಮಾನಿಯಾಗಿದ್ದರು. ತಮ್ಮ ಕುಲಕಸುಬು ನಿರ್ವಹಿಸುವ ಮೂಲಕ ಕೆರೆಕಟ್ಟೆಗಳನ್ನು ನಿರ್ಮಿಸಿದರು. 12ನೇ ಶತಮಾನದ ಪ್ರಮುಖ ವಚನಕಾರರಲ್ಲಿ ಒಬ್ಬರಾದರು. ಮಾಡುವ ಕೆಲಸಗಳಲ್ಲಿ ಕೀಳರಿಮೆ ಬಿಟ್ಟು ಸ್ವಾಭಿಮಾನಿಯಾಗಿರಬೇಕು. ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವಿದೆ’ ಎಂದು ಸಲಹೆ ನೀಡಿದರು.

ADVERTISEMENT

‘ನಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು. ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಇಂದು ನಾವು ಕಠಿಣ ಎನಿಸುವ ನಿರ್ಧಾರಗಳನ್ನು ತೆಗೆದುಕೊಂಡು ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಬೇಕು. ನಮ್ಮ ದೇಶಕ್ಕೆ ಸಂವಿಧಾನ ಕೊಟ್ಟವರು,  ಸಮಾಜ ಸುಧಾರಣೆಗಳಲ್ಲಿ ಭಾಗವಹಿಸಿದವರಲ್ಲಿ ಪ್ರಮುಖರೆಲ್ಲರೂ ದಮನಿತ ಸಮುದಾಯದವರೇ ಆಗಿದ್ದರು’ ಎಂದು ಹೇಳೀದರು.

ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿ, ನಗರಸಭೆ ಎಂಜಿನಿಯರ್‌ ರಮೇಶ ಬಸಾಪಟ್ಟಣ, ಕಲಾವಿದ ಭಾಷಾ ಹಿರೇಮನಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಉಪ ತಹಶೀಲ್ದಾರ್ ಗವಿಸಿದ್ದಪ್ಪ ಮನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ಸದಸ್ಯರಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ರಾಜಶೇಖರ ಆಡೂರ, ಸಮುದಾಯದ ಜಿಲ್ಲಾಧ್ಯಕ್ಷ ನಿಂಗಪ್ಪ ಭೋವಿ, ಉಪಾಧ್ಯಕ್ಷ ರಾಮಣ್ಣ ಅಳವಂಡಿ, ಗಾಳೆಪ್ಪ ಗಂಗಾವತಿ, ಸತ್ಯಪ್ಪ ಗೌರಿಪುರ, ಪರಶುರಾಮ ತಾವರಗೇರಿ, ಬಸವರಾಜ ಭೋವಿ ಸೇರಿ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.