ಕೊಪ್ಪಳ: ‘ಯುಪಿಎಸ್‌ಸಿ ಪರೀಕ್ಷೆಗೆ ಪದವಿ ಹಂತಕ್ಕೂ ಮೊದಲೇ ಸಿದ್ಧತೆ ನಡೆಸಬೇಕು. ನೀವು ತಯಾರಿ ಆರಂಭಿಸಿದರೆ ಮಾರ್ಗದರ್ಶನ ಮಾಡಿ ಅವಕಾಶಗಳನ್ನು ಒದಗಿಸಬಹುದು. ಆದರೆ ಓದಬೇಕಾದವರು ನೀವೇ. ಅದಕ್ಕಾಗಿ ಬದಲಾವಣಿ ನಿಮ್ಮಿಂದ ಇಂದಿನಿಂದಲೇ ಆರಂಭವಾಗಬೇಕು’
–ಇದು ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕ ವಿನಯ್ ಕುಮಾರ್ ಜಿ.ಬಿ. ಅವರು ಸ್ಪರ್ಧಾಕಾಂಕ್ಷಿಗಳಿಗೆ ಹೇಳಿದ ಕಿವಿಮಾತು.
ತಮ್ಮ ಮಾತಿನುದ್ದಕ್ಕೂ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಅವರು, ‘ಬಡತನವಿದ್ದರಿಂದ ದನದ ಕೊಟ್ಟಿಗೆಯ ಮನೆಯಲ್ಲಿ ವಾಸಿಸಬೇಕಾದ ಸ್ಥಿತಿ ನಮ್ಮ ಕುಟುಂಬದ್ದಾಗಿತ್ತು. ಆಗ ತಂದೆಗೆ ಕೆಲಸವಿರಲಿಲ್ಲ. ಆದರೆ ತಂದೆ ಮನೆಗೆ ಬರುವಾಗಲೆಲ್ಲ ಹೊಟ್ಟೆಗೆ ಹಿಟ್ಟಿಲ್ಲವಾದರೂ ಮಕ್ಕಳಿಗೆ ಬುದ್ಧಿ ಬೇಕು ಎಂದು ಪುಸ್ತಕ ತಂದುಕೊಡುತ್ತಿದ್ದರು. ಆ ಪುಸ್ತಕ ಪ್ರೀತಿಯೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ’ ಎಂದು ನೆನಪಿಸಿಕೊಂಡರು.
‘ಐಎಎಸ್ ಅಧಿಕಾರಿಯಾಗಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದ್ದರಿಂದ ಈ ಪರೀಕ್ಷೆಗೆ ತಯಾರಿ ನಡೆಸುವ ಮಕ್ಕಳಿಗಾಗಿ ವೆಬ್‌ಸೈಟ್ ರೂಪಿಸಿ ಅದರಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೆ. ಕಿರು ಪರೀಕ್ಷೆ ನಡೆಸುತ್ತಿದ್ದೆ. ಹಂತಹಂತವಾಗಿ ರೂಪುಗೊಂಡ ನಮ್ಮ ಸಂಸ್ಥೆ ಇಂದು ದೊಡ್ಡಮಟ್ಟದಲ್ಲಿ ಸಾಧನೆ ಮಾಡಿದೆ’ ಎಂದರು.
‘ಕಂಡ ಕನಸು ನನಸು ಮಾಡಿಕೊಳ್ಳಲು ಸಾಮರ್ಥ್ಯ ಬೇಕು. ಮುಂಬರುವ ವರ್ಷಗಳಲ್ಲಿ 100 ಜನ ರಾಜ್ಯದಿಂದ ಐಎಎಸ್ ಅಧಿಕಾರಿಗಳು ಬರಬೇಕು. ಅದರಲ್ಲಿ ಕೊಪ್ಪಳದ ಗ್ರಾಮೀಣ ಪ್ರದೇಶಗಳ ಮಕ್ಕಳ ಸಂಖ್ಯೆಯೇ ಹೆಚ್ಚಿರಬೇಕು. ಆಗ ಮಾತ್ರ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎನ್ನುವ ಅಭಿಪ್ರಾಯ ನನ್ನದು’ ಎಂದು ಹೇಳಿದರು.
‘ಹಿಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ನೂರಾರು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಶಿಕ್ಷಣ ಗುಣಮಟ್ಟ ಪೂರ್ಣ ಕುಸಿದು ಹೋಗಿದೆ. ಶಿಕ್ಷಣದಲ್ಲಿ ಅಸಮಾನತೆ ಹೋಗದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ ಪಡೆಯುವಾಗ ಎದುರಿಸಿದ ಅವಮಾನವನ್ನು ಉನ್ನತ ಶಿಕ್ಷಣ ಪಡೆಯುವಾಗಲೂ ಎದುರಿಸಿದರು. ಆದರೂ ಅವರು ದೊಡ್ಡ ಎತ್ತರಕ್ಕೆ ಬೆಳೆದರು. ಜೀವನದಲ್ಲಿ ಎಷ್ಟೇ ಅವಮಾನವಾದರೂ ಅದರ ಬಗ್ಗೆ ದೂರದೇ ಸ್ವಂತ ಶಕ್ತಿಯಿಂದ ಮೇಲೆ ಬರುವೆ ಎನ್ನುವ ಶಕ್ತಿ ಅವರಲ್ಲಿ ಅಗಾಧವಾಗಿತ್ತು. ಅಂಥ ಶಕ್ತಿ ಎಲ್ಲರೂ ಗಳಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಠ್ಯಗಳನ್ನು ಹೊರತುಪಡಿಸಿ ಬೇರೆ ಪುಸ್ತಕಗಳನ್ನು ಹೆಚ್ಚು ಓದಿದರೆ ಯಶಸ್ಸು ಸಾಧಿಸುತ್ತೀರಿ. ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಚಾಚೂ ತಪ್ಪದೇ ನಿತ್ಯ ಕನಿಷ್ಠ ಎರಡು ಗಂಟೆಯಾದರೂ ಓದಬೇಕು.-ವಿನಯ್ ಕುಮಾರ್ ಜಿ.ಬಿ. ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.