ADVERTISEMENT

ಸಂಪೂರ್ಣ ರಾಮಾಯಣದ ‘ರಾಜಶೇಖರ’: ಮೂರು ದಶಕಗಳಿಂದ ಕಲಾ ಪ್ರದರ್ಶನ

ದೊಡ್ಡಾಟದಲ್ಲಿ ಸ್ತ್ರೀ ಪಾತ್ರಗಳ ಸಂಕಥನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 4:48 IST
Last Updated 27 ಅಕ್ಟೋಬರ್ 2024, 4:48 IST
ಸಂಪೂರ್ಣ ರಾಮಾಯಣದಲ್ಲಿ ಸೀತಾದೇವಿ ಪಾತ್ರದಲ್ಲಿ ರಾಜಶೇಖರ
ಸಂಪೂರ್ಣ ರಾಮಾಯಣದಲ್ಲಿ ಸೀತಾದೇವಿ ಪಾತ್ರದಲ್ಲಿ ರಾಜಶೇಖರ   

ಕೊಪ್ಪಳ: ಕಲಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿರುವ ಕೊಪ್ಪಳದ ರಾಜಶೇಖರ ಮಹಾದೇವಪ್ಪ ದೊಡ್ಡಮನಿ ದೊಡ್ಡಾಟದಲ್ಲಿ ಸ್ರ್ತೀ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇಲ್ಲಿನ ಬಸವೇಶ್ವರ ನಗರದ ನಿವಾಸಿಯಾಗಿರುವ ಬ್ಯಾಂಕ್‌ ಉದ್ಯೋಗಿ ರಾಜಶೇಖರ ಜಿಲ್ಲಾಕೇಂದ್ರವನ್ನೇ ಕೇಂದ್ರವಾಗಿರಿಸಿಕೊಂಡು ದೊಡ್ಡಾಟ ಕಲಾ ಪ್ರದರ್ಶನವನ್ನು ನೀಡುತ್ತ ಬಂದಿದ್ದಾರೆ. ಅದರಲ್ಲಿಯೂ ಸಂಪೂರ್ಣ ರಾಮಾಯಣದ ದೊಡ್ಡಾಟದಲ್ಲಿ ಸೀತೆಯ ಪಾತ್ರದಲ್ಲಿ ಪಾತ್ರಕ್ಕೆ ಜೀವ ತುಂಬುವ ರೀತಿಯಲ್ಲಿ ಅಭಿನಯಿಸುವುದು ಅವರಿಗೆ ಕರಗತವಾಗಿದೆ. ಹೀಗಾಗಿ ’ಸಂಪೂರ್ಣ ರಾಮಾಯಣದ ರಾಜಶೇಖರ’ ಎನ್ನುವ ಗೌರವವೂ ಲಭಿಸಿದೆ. 

ಪ್ರತಿ ವರ್ಷ ಇಲ್ಲಿನ ಗವಿಸಿದ್ಧೇಶ್ವರ ಜಾತ್ರೆಯ ಮೂರನೇ ದಿನದ ಕಾರ್ಯಕ್ರಮದ ವೇಳೆ ತಮ್ಮ ಬಡಾವಣೆಯಲ್ಲಿ ಸಂಪೂರ್ಣ ರಾಮಾಯಣ ಬಯಲಾಟ, ದೊಡ್ಡಾಟ ಪ್ರದರ್ಶನ ಮಾಡುತ್ತಾರೆ. 1995–96ರಿಂದಲೇ ಮಂಡೋದರಿ, ಸೀತಾದೇವಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ADVERTISEMENT

ಬಸವೇಶ್ವರ ಬಡಾವಣೆಯಲ್ಲಿ ಈ ಮೊದಲು ಸ್ತ್ರೀ ಪಾತ್ರ ನಿರ್ವಹಿಸುತ್ತಿದ್ದ ದಿವಂಗತ ಸಿದ್ದಪ್ಪ ದೊಡ್ಡಮನಿ ಅವರನ್ನು ನೋಡಿಕೊಂಡು ಅಭಿನಯದ ಪಾಠ ಕಲಿತ ರಾಜಶೇಖರ ಅವರ ಬಳಿಕ ಸ್ತ್ರೀ ಪಾತ್ರಗಳಿಗೆ ಜೀವ ತುಂಬುವ ಕೆಲಸ ಆರಂಭಿಸಿದರು. ಆಗಿನಿಂದ ಇದು ಈಗಲೂ ನಡೆದುಕೊಂಡು ಬಂದಿದೆ. ಶತಕಂಠ ರಾವಣ ದೊಡ್ಡಾಟದಲ್ಲಿ ಕೌಶಲ್ಯದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಬಡಾವಣೆಯಲ್ಲಿ ಮೊದಲಿನಿಂದಲೂ ಇದ್ದ ಕಲೆ ಹಾಗೂ ಸಾಂಸ್ಕೃತಿಕ ವಾತಾವರಣದ ಸ್ಪರ್ಶದಿಂದ ಅವರಲ್ಲಿನ ಕಲಾವಿದ ಹೊರಬಂದಿದ್ದಾರೆ. ರಾಜಶೇಖರ ಶಾಲೆಗೆ ಹೋಗುತ್ತಿದ್ದಾಗ ದೊಡ್ಡಾಟದ ಮಾತುಗಳನ್ನು ಕಲಾವಿದರಿಗೆ ಹೇಳಿಕೊಡುತ್ತಿದ್ದರು. ಕಾಲ ಉರುಳಿದಂತೆ ಅವರೇ ದೊಡ್ಡಾಟದ ಮೇಸ್ಟ್ರು ಆಗಿ ಸಂಪೂರ್ಣ ದೊಡ್ಡಾಟವನ್ನು ನಿಯಂತ್ರಿಸುವ ಕೌಶಲ ಕಲಿತುಕೊಂಡಿದ್ದಾರೆ.

ತಮ್ಮ ಬಡಾವಣೆಯ ಹಿರಿಯರು ಮಾಡುತ್ತಿದ್ದ ದೊಡ್ಡಾಟವನ್ನು ನೋಡಿಕೊಂಡು ಕಲಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ರಾಜಶೇಖರ ಅವರಿಗೆ ಸಂಘಟಕರಾಗಿದ್ದ ದಿವಂಗತ ಟಿ.ಕೆ. ಗೌಡ ಸ್ಥಾಪಿಸಿರುವ ಕನ್ನಡ ಜಾನಪದ ಪರಿಷತ್‌ ಪ್ರತಿ ವರ್ಷ ನೀಡುವ ಪ್ರಶಸ್ತಿ ಈ ಬಾರಿ ಲಭಿಸಿದೆ.

‘ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಯಾವುದೇ ಕಲೆಯಾದರೂ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಅದರಲ್ಲಿ ಯಶಸ್ಸು ಸಾಧಿಸಬಹುದು. ಪಾತ್ರಗಳ ಮನನದಿಂದ ನಿರಂತರತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಪುರುಷನಾಗಿ ದೊಡ್ಡಾಟದಲ್ಲಿ ಸ್ತ್ರೀ ಪಾತ್ರದಲ್ಲಿ ಅಭಿನಯಿಸುವುದು ಸವಾಲಿನ ಕೆಲಸ. ಹಿರಿಯರ ಆಶೀರ್ವಾದದಿಂದ ಈ ಕೆಲಸ ಸಾಧ್ಯವಾಗಿದೆ’ ಎಂದು ರಾಜಶೇಖರ ಹೇಳಿದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.