ADVERTISEMENT

ಗಂಗಾವತಿ | ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಿಕೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 15:32 IST
Last Updated 25 ನವೆಂಬರ್ 2024, 15:32 IST

ಗಂಗಾವತಿ: ಇಲ್ಲಿನ ಜಯನಗರದ ಬಿಸಿಎಂ ವಸತಿ ನಿಲಯದಲ್ಲಿ ನೀಡುತ್ತಿರುವ ಕಳಪೆ ಗುಣಮಟ್ಟದ ಆಹಾರ, ಸ್ವಚ್ಛತೆ, ಗ್ರಂಥಾಲಯದಲ್ಲಿನ ಪುಸ್ತಕದ ಕೊರತೆ ಖಂಡಿಸಿ, ಭಾನುವಾರ ರಾತ್ರಿ ಎಸ್.ಎಫ್.ಐ ಸಂಘಟನೆ ನೇತೃತ್ವದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ವಸತಿ ನಿಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

‘ರಾತ್ರಿ ವೇಳೆಯಲ್ಲಿ ವಿದ್ಯಾರ್ಥಿಗಳು ವಸತಿ ನಿಲಯ ಆವರಣಕ್ಕೆ ಬಂದು, ವಸತಿ ನಿಲಯದಲ್ಲಿ ಸರಿಯಾದ ಮೂಲ ಸೌಕರ್ಯವಿಲ್ಲ. ಈಚೆಗೆ ಚಳಿ ಹೆಚ್ಚಿದ್ದರೂ, ಜಳಕ ಮಾಡಲು ಬಿಸಿನೀರಿನ ವ್ಯವಸ್ಥೆಯಿಲ್ಲ. ಗಣಕಯಂತ್ರದ ಕೊರತೆಯಿದೆ. ಊಟದಲ್ಲಿ ತರಕಾರಿ ಇರಲ್ಲ, ಊಟದ ಕೊಠಡಿ ಸ್ವಚ್ಛತೆಯಿರಲ್ಲ. ನೀರಿನ ಟ್ಯಾಂಕ್ ತೊಳೆಯಲ್ಲ. ಇನ್ನೂ ಸಾಕಷ್ಟು ಸಮಸ್ಯೆಗಳಿದ್ದು, ಇವುಗಳನ್ನು ವಾರ್ಡನ್‌ಗೆ ತಿಳಿಸಿದರೇ, ಸುಮ್ಮನೆ ಎಲ್ಲರನ್ನೂ ನಿಂದಿಸುತ್ತಾರೆ’ ಎಂದು ದೂರಿದರು.

ಬೆಳಿಗ್ಗೆ ಎಸ್.ಎಫ್.ಐ ಸಂಘಟನೆ ನೇತೃತ್ವದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಬಿಸಿಎಂ ಇಲಾಖೆ ಕಚೇರಿಗೆ ಭೇಟಿ ನೀಡಿ, ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಬೇಕು ಎಂದು ಒತ್ತಾಯಿಸಿ, ಅಲ್ಲಿನ ಕಚೇರಿ ವ್ಯವಸ್ಥಾಪಕ ಸುರೇಶ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಎಸ್.ಎಫ್.ಐ ಸಂಘಟನೆ ಕೇಂದ್ರ ಸಮಿತಿ ಸದಸ್ಯ ಅಮರೇಶ ಕಡಗದ, ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಸದಸ್ಯರಾದ ಪ್ರಶಾಂತ್, ಸಮೀರ್, ನಾಗರಾಜ, ವಿಜಯ, ಮುತ್ತಣ್ಣ, ರಾಘವೇಂದ್ರ ಸೇರಿ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.