ಕೊಪ್ಪಳ: ಒಂದು ದಶಕದ ಹಿಂದೆ ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ನಡೆದ ದಲಿತರು ಹಾಗೂ ಸವರ್ಣೀಯರ ನಡುವಿನ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 101 ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಲಾಗಿದೆ.
ಇನ್ನುಳಿದ ಮೂವರಿಗೆ ಐದು ವರ್ಷ ಜೈಲು ಹಾಗೂ ತಲಾ ₹2,000 ದಂಡ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ →ಗುರುವಾರ ಆದೇಶ →ನೀಡಿದೆ. ಈ ಮೂವರೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರಿಂದ ಜಾತಿನಿಂದನೆ ಕಾಯ್ದೆ ಅನ್ವಯವಾಗಿಲ್ಲ.
ಈ ಪ್ರಕರಣದಲ್ಲಿ ಒಟ್ಟು 117 ಜನ ಆರೋಪಿಗಳಿದ್ದರು. ಅವರಲ್ಲಿ 11 ಜನ ಮೃತಪಟ್ಟಿದ್ದು, ಇಬ್ಬರು ಬಾಲಕರಾಗಿ
ದ್ದರು. ಇನ್ನುಳಿದವರಲ್ಲಿ ಕೆಲವರ ಹೆಸರು ಪುನರಾವರ್ತನೆಯಾಗಿದ್ದವು. ಒಟ್ಟು 172 ಪುಟಗಳ ತೀರ್ಪು ಪ್ರಕಟಿಸಲಾಗಿದೆ.
ಪ್ರಕರಣದಲ್ಲಿ 101 ಜನ ಅಪರಾಧಿ
ಗಳಾಗಿದ್ದಾರೆ ಎಂದು ಇಲ್ಲಿನ ನ್ಯಾಯಾಲಯ ಅ. 21ರಂದು ಆದೇಶ ನೀಡಿ ಶಿಕ್ಷೆ ಪ್ರಮಾಣವನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು.
ಆಗಿದ್ದೇನು?
2014ರ ಆಗಸ್ಟ್ 28ರಂದು ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ‘ಪವರ್’ ಸಿನಿಮಾ ನೋಡಲು ಟಿಕೆಟ್ ಪಡೆಯುವಾಗ ದಲಿತರು ಹಾಗೂ ಸವರ್ಣೀಯರ ನಡುವೆ ಮಾತಿಗೆ ಮಾತು ಬೆಳೆದು ಶುರುವಾದ ಜಗಳ ಸಂಘರ್ಷಕ್ಕೆ ತಿರುಗಿತ್ತು.
ಈ ಕುರಿತು ಅದೇ ಗ್ರಾಮದ ಮಾದಿಗ ಸಮುದಾಯದ ಭೀಮೇಶ ಎಂಬವರು ದೂರು ನೀಡಿದ್ದರು. ‘ನಮ್ಮ ಗ್ರಾಮದ ಸವರ್ಣೀಯ ಮಂಜುನಾಥ ಈಳಿಗೇರ ಹಾಗೂ ಇತರರು ಟಿಕೆಟ್ ಪಡೆಯುವಾಗ ಯಾರೊ ವ್ಯಕ್ತಿಗಳ ಜೊತೆ ಜಗಳ ಮಾಡಿಕೊಂಡಿದ್ದರು. ಆಗ ಅವರ ಮೇಲೆ ಹಲ್ಲೆಯಾಗಿತ್ತು. ಅದನ್ನು ನಾವೇ ಮಾಡಿಸಿದ್ದೇವೆ ಎಂದು ತಪ್ಪು ತಿಳಿದುಕೊಂಡು ಮಂಜುನಾಥ ಅವರು ಗ್ರಾಮಕ್ಕೆ ಸವರ್ಣೀಯರನ್ನು ಕರೆದುಕೊಂಡು ಬಂದು ನಮ್ಮ ಸಮುದಾಯದ ಜನರ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ್ದ. ಗ್ರಾಮದಲ್ಲಿ ಗುಡಿಸಲುಗಳಿಗೆ ಬೆಂಕಿಯನ್ನೂ ಹಚ್ಚಲಾಗಿತ್ತು’ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಂಜುನಾಥನನ್ನೇ ಮೊದಲನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಚಿತ್ರಮಂದಿರದಲ್ಲಿ ಈ ಘಟನೆ ನಡೆಯುವುದಕ್ಕೂ ಮೊದಲು ಹಾಗೂ ನಂತರ ಗ್ರಾಮದಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ಸಂಘರ್ಷಗಳು ನಡೆಯುತ್ತಲೇ ಇದ್ದವು. ದೇಶದಲ್ಲಿ ಹಲವು ಕಡೆ ನಡೆದ ಪ್ರಕರಣಗಳ ತೀರ್ಪುಗಳನ್ನು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
‘ಒಂದೇ ಪ್ರಕರಣದಲ್ಲಿ ಇಷ್ಟು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ದೇಶದಲ್ಲಿ ಇದೇ ಮೊದಲಿರಬಹುದು’ ಎಂದು ಹಿರಿಯ ವಕೀಲ ಎ.ವಿ. ಕಣವಿ ಹೇಳಿದರು. ಸರ್ಕಾರಿ ಅಭಿಯೋಜಕಿ ಅಪರ್ಣಾ ಬಂಡಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.