ADVERTISEMENT

ಕುಷ್ಟಗಿ | ಶ್ರೇಯಕ್ಕಾಗಿ ಕಾಂಗ್ರೆಸ್‌, ಬಿಜೆಪಿ ‘ಹೋರಾಟ’

ನಾರಾಯಣರಾವ ಕುಲಕರ್ಣಿ
Published 8 ಅಕ್ಟೋಬರ್ 2023, 6:13 IST
Last Updated 8 ಅಕ್ಟೋಬರ್ 2023, 6:13 IST
ಕಾಂಗ್ರೆಸ್‌ ಬೆಂಬಲಿಗರು ಹಂಚಿಕೊಂಡಿರುವ ಮಾಹಿತಿ
ಕಾಂಗ್ರೆಸ್‌ ಬೆಂಬಲಿಗರು ಹಂಚಿಕೊಂಡಿರುವ ಮಾಹಿತಿ   

ಕುಷ್ಟಗಿ: ತಾಲ್ಲೂಕಿನ ನಿಲೋಗಲ್‌ ಮತ್ತು ತಳುವಗೇರಾ ಗ್ರಾಮಗಳಿಗೆ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ.

2022ರ ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲೆಯ ಗಂಗಾವತಿ ಮತ್ತು ಕುಷ್ಟಗಿ ತಾಲ್ಲೂಕಿನ ತಲಾ ಎರಡು ಗ್ರಾಮಗಳಿಗೆ ಹೊಸದಾಗಿ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿದ್ದ ಇಲಾಖೆ ಯಾವ ಊರುಗಳಲ್ಲಿ ಸ್ಥಾಪನೆ ಅಗತ್ಯವಿದೆ ಎಂಬುದರ ಬಗ್ಗೆ ಸ್ಥಳ ಆಯ್ಕೆ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆದೇಶಿಸಿತ್ತು. ಅದರ ಅನ್ವಯ ಕುಷ್ಟಗಿ ತಾಲ್ಲೂಕಿನ ತಳುವಗೇರಾ ಮತ್ತು ನಿಲೋಗಲ್ ಗ್ರಾಮಗಳನ್ನು ಶಿಫಾರಸು ಮಾಡಿರುವ ಜಿಲ್ಲಾ ಆರೋಗ್ಯ ಇಲಾಖೆ ಕೇಂದ್ರಗಳನ್ನು ಮಂಜೂರು ಮಾಡುವಂತೆ ಕೋರಿ ಇಲಾಖೆಗೆ ಮಾಹಿತಿ ರವಾನಿಸಿದೆ.

ನನ್ನ ಅವಧಿಯಲ್ಲಿ ನಿಲೋಗಲ್‌ ಗ್ರಾಮದಲ್ಲಿ ಕೇಂದ್ರ ಸ್ಥಾಪನೆಗೆ ಪತ್ರ ಬರೆದಿದ್ದೆ. ತಳುವಗೇರಾ ಬಗ್ಗೆ ಇಲಾಖೆಯೇ ನಿರ್ಧರಿಸಿತ್ತು. ಏನೇ ಆಗಲೇ ಜನರ ಆರೋಗ್ಯ ರಕ್ಷಣೆ ಮುಖ್ಯ.
ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ

ಇದರ ಬೆನ್ನಲ್ಲೇ ಆಸ್ಪತ್ರೆಗಳ ಶ್ರೇಯ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ರಾಜಕೀಯ ಮೇಲಾಟಕ್ಕೆ ಬಿದ್ದಿದ್ದಾರೆ. 

ADVERTISEMENT

ಅ. 3ರಂದು ಜಿಲ್ಲಾ ಆರೋಗ್ಯ ಅಧಿಕಾರಿ ಶಿಫಾರಸು ಮಾಡಿರುವ ಪತ್ರ ಅದೇ ದಿನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ಇದನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಮಾಜಿ ಶಾಸಕ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ ಅವರ ಬೆಂಬಲಿಗರು ತಮ್ಮ ನಾಯಕರ ಪ್ರಯತ್ನದಿಂದ ಆರೋಗ್ಯ ಕೇಂದ್ರಗಳು ಮಂಜೂರಾಗಿವೆ ಎನ್ನುತ್ತಿದ್ದಾರೆ.

ತಳುವಗೇರಾ ಕೊರಡಕೇರಾ ನಿಲೋಗಲ್‌ ಮೆಣೆದಾಳದಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ.. ಸರ್ಕಾರ ಎರಡು ಕೇಂದ್ರಕ್ಕೆ ಅನುಮತಿ ಕೊಟ್ಟಿದೆ. ಇದನ್ನು ಯಾರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ.
ದೊಡ್ಡನಗೌಡ ಪಾಟೀಲ, ಬಿಜೆಪಿ ಶಾಸಕ

ಈ ವಿಷಯ ಈಗ ತಾಲ್ಲೂಕಿನಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರಿಗೆ ಪ್ರತಿಷ್ಠೆಯಂತಾಗಿದ್ದು ಸರ್ಕಾರದ ಮಟ್ಟದಲ್ಲಿ ಅಮರೇಗೌಡ ಬಯ್ಯಾಪುರ ಬಹಳಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಬೆಂಬಲಿಗರು ಹೇಳಿದರೆ, ದೊಡ್ಡನಗೌಡ ಪಾಟೀಲ ಸರ್ಕಾರಕ್ಕೆ ಪತ್ರ ಬರೆದಿರುವುದರ ಫಲವಾಗಿ ಕೇಂದ್ರಗಳು ಮಂಜೂರಾಗಿವೆ ಎಂದೆ ಬಿಜೆಪಿ ಬೆಂಬಲಿಗರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಬಿಜೆಪಿ ಬೆಂಬಲಿಗರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.