ADVERTISEMENT

ಮತಬ್ಯಾಂಕ್‌ ಕಾರಣಕ್ಕೆ ಕಾಂಗ್ರೆಸ್‌ನಿಂದ ರಾಮನ ವಿರೋಧ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 5:25 IST
Last Updated 21 ಜನವರಿ 2024, 5:25 IST
<div class="paragraphs"><p>ಶೋಭಾ ಕರಂದ್ಲಾಜೆ</p></div>

ಶೋಭಾ ಕರಂದ್ಲಾಜೆ

   

ಗಂಗಾವತಿ (ಕೊಪ್ಪಳ ಜಿಲ್ಲೆ) ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಓಲೈಸಲು ಹಾಗೂ ಅವರನ್ನು ಮತಬ್ಯಾಂಕ್‌ ಆಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಶ್ರೀರಾಮನನ್ನು ವಿರೋಧಿಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ತಾಲ್ಲೂಕಿನ ಅಂಜನಾದ್ರಿಯಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಮತ್ತು ಆಂಜನೇಯನ ಪಾದಗಟ್ಟೆಗೆ ಪೂಜೆ ಸಲ್ಲಿಸಿದ ಬಳಿಕ ಭಾನುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಬಯಲಲ್ಲಿದ್ದ ಶ್ರೀರಾಮ ಭವ್ಯ ರಾಮಮಂದಿರಕ್ಕೆ ಬರಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿತ್ತು. ಅಂದುಕೊಂಡಂತೆ ಈಗ ಎಲ್ಲವೂ ಆಗಿದ್ದು ಪ್ರಾಣ ಪ್ರತಿಷ್ಠಾಪನೆ ಕಾರ್ಯ ಸೋಮವಾರ ನಿರ್ವಿಘ್ನವಾಗಿ ನಡೆಯಬೇಕು ಎಂದು ರಾಮನ ಬಂಟ ಹನುಮಂತನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಅನೇಕ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಮಮಂದಿರದ ಇತಿಹಾಸ ಹೇಳುತ್ತಿದ್ದರು. ಆದರೆ ಜನರ ಮುಂದೆ ಸತ್ಯವನ್ನು ಬಿಚ್ಚಿಡುವ ಕೆಲಸವನ್ನು ನರೇಂದ್ರ ಮೋದಿ ಮಾಡಿದ್ದಾರೆ. ರಾಜ್ಯದ ಶಿಲೆ ಮತ್ತು ಶಿಲ್ಪಿಯಿಂದ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಆಂಜನೇಯ ನಮ್ಮ ರಾಜ್ಯದಲ್ಲಿ ಹುಟ್ಟಿದವನು. ರಾಮನಿಗೆ ಸೀತೆಯನ್ನು ಹುಡುಕಲು ನೆರವಾಗಿದ್ದು ಆಂಜನೇಯ. ಇದೇ ಹನುಮ ಜನಿಸಿದ ನಾಡು. ಇಂಥ ಪವಿತ್ರ ಕ್ಷೇತ್ರದಲ್ಲಿ ಮೊದಲ ಪೂಜೆ ಮಾಡಲು ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಪೂಜೆ ಸಲ್ಲಿಸಿದ ಶೋಭಾ ಕರಂದ್ಲಾಜೆ ‘ದೇಶ ಕಟ್ಟುವ ಪ್ರಧಾನಿ ಕಾಯಕಕ್ಕೆ ನಾವೆಲ್ಲರೂ ಕೈ ಜೋಡಿಸುತ್ತಿದ್ದೇವೆ. ದೇಶದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸಿಕೊಂಡಿದ್ದೇನೆ’ ಎಂದರು.

‘ಕಾಂಗ್ರೆಸ್‌ ಪಕ್ಷವನ್ನು ದೇಶದ ಜನ ಈಗ ವಿರೋಧಿಸುತ್ತಿದ್ದಾರೆ. ರಾಮಮಂದಿರ ವಿರುದ್ಧವಾಗಿ ಕಾಂಗ್ರೆಸ್‌ ವಾದ ಮಂಡಿಸಿತು. ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎನ್ನುವ ಸತ್ಯಗೊತ್ತಿದ್ದರೂ ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸಲು ರಾಮನ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡಿತು. ಅಲ್ಪಸಂಖ್ಯಾತರ ಮತದಿಂದಾಗಿ ಮಾತ್ರ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ ಅಂದುಕೊಂಡಿದೆ’ ಎಂದು ಆಪಾದಿಸಿದರು.

‘ಚುನಾವಣೆ ಬಂದಾಗ ಕಾಂಗ್ರೆಸ್‌ ನಾಯಕರು ದೇವಸ್ಥಾನ ಸುತ್ತುತ್ತಾರೆ. ರಾಮಮಂದಿರ ಕಾರ್ಯಕ್ರಮದ ವಿಷಯದಲ್ಲಿ ಆ ಪಕ್ಷದವರು ರಾಜಕಾರಣ ಮಾಡುತ್ತಿದ್ದಾರೆ. ಇನ್ನೂ ಕೆಲ ಅಂಧ ಭಕ್ತರ ಸಿದ್ದರಾಮಯ್ಯ ಅವರನ್ನೇ ರಾಮ ಎಂದು ಕರೆಯುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಂತೋಷ ಕೆಲೋಜಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.