ಗಂಗಾವತಿ: ಈ ಭಾಗದ ರೈತರ ಜೀವನಾಡಿ ತುಂಗಾಭದ್ರ ಜಲಾಶಯದಿಂದ ರೈತರ ಭೂಮಿಗಳಿಗೆ ನೀರು ಒದಗಿಸುವ ಉದ್ದೇಶದಿಂದ ನಡೆಯುತ್ತಿರುವ ತುಂಗಾಭದ್ರ ಎಡದಂಡೆ ಕಾಲುವೆಯ ವಿಜಯನಗರ ಕಾಲದ ಉಪಕಾಲುವೆಗಳ ಆಧುನಿಕರಣ ಕಾಮಗಾರಿ ಕಳಪೆಯಾಗಿದೆ ಎಂದು ರೈತರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ವಿಜಯನಗರ ಕಾಲದ 16 ಉಪ ಕಾಲುವೆಗಳ ಆಧುನೀಕರಣಕ್ಕೆ ಏಷ್ಯನ್ ಡವಲೆಪ್‌ಮೆಂಟ್ ಬ್ಯಾಂಕ್‌ನಿಂದ ₹371.01 ಕೋಟಿ ಸಾಲ ಪಡೆದು, ನೀರಾವರಿ ಇಲಾಖೆ ಮೂಲಕ ಟೆಂಡರ್ ಕರೆದು ಕಾಮಗಾರಿಗೆ ಮುಂದಾಗಿತ್ತು. ಈ ಕೆಲಸ ಪೂರ್ಣಗೊಳಿಸಲು 30 ತಿಂಗಳು ಅವಧಿ ನೀಡಲಾಗಿತ್ತು. ಟೆಂಡರ್ ಪಡೆದು 2019ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಿದ ಹುಬ್ಬಳ್ಳಿ ಆರ್.ಎನ್. ಇನ್‌ಫ್ರಾಸ್ಟ್ರೆಕ್ಚರ್ ಲಿಮಿಟೆಡ್ ನಿಗದಿತ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಿಲ್ಲ. ಪ್ರಸ್ತುತ ಒಟ್ಟು ಕಾಮಗಾರಿಯಲ್ಲಿ ಶೇ. 50ರಷ್ಟು ಪೂರ್ಣಗೊಂಡಿಲ್ಲ.
ಆನೆಗೊಂದಿ ವಿಜಯನಗರ ಉಪಕಾಲುವೆ, ದೇವಘಾಟ್ ಮೇಲ್ಗಣ, ಕೆಳಗಣ ಕಾಲುವೆ ವ್ಯಾಪ್ತಿಯಲ್ಲಿ 60 ಸಾವಿರ ಎಕರೆಗೂ ಹೆಚ್ಚು ಜಮೀನು ಇದ್ದು, ಕಾಲುವೆ ಕಾಮಗಾರಿ ಆರಂಭಿಸಿದಾಗಲೆಲ್ಲ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಲೆ ಇದೆ. ಇದರಿಂದ ಬೆಳೆ ಇಳುವರಿ ಮೇಲೂ ಪರಿಣಾಮವಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿ: ಕಾಲುವೆ ಕಾಮಗಾರಿಗೆ ಕಬ್ಬಿಣ ಬಳಸದೆ ಮೊರಂ ಹಾಕಿ ಗಟ್ಟಿಗೊಳಿಸಲಾಗುತ್ತಿದೆ. ಜೆಸಿಬಿಯಿಂದ ಮಣ್ಣು ತೆಗಿಸಿ, ಕಾರ್ಮಿಕರಿಂದಲೇ ಕಾಲುವೆ ಅಳಅಗಲ ಅಳತೆ ಮಾಡಿಸಲಾಗುತ್ತಿದೆ.
ಆನೆಗೊಂದಿ ವಿಜಯನಗರ ಉಪಕಾಲುವೆ ಆಧುನಿಕರಣಕ್ಕೆ ₹40,85 ಕೋಟಿ, ದೇವಘಾಟ್ ಮೇಲ್ಗಣ ಕಾಲುವೆಗೆ ₹34.45 ಕೋಟಿ, ದೇವಘಾಟ್ ಕೆಳಗಣ ಕಾಲುವೆ ₹32.54 ಕೋಟಿ ನಿಗದಿ ಪಡಿಸಿದ್ದು, 39 ತಿಂಗಳ ಅವಧಿಯಲ್ಲಿ ಎಲ್ಲ ಸೇರಿ ₹20.04 ಕೋಟಿ ವೆಚ್ಚದ ಕಾಮಗಾರಿ ಮಾತ್ರ ನಡೆದಿದೆ. ವಿಜಯನಗರ ಉಪಕಾಲುವೆ ಕಾಮಗಾರಿ 19.44 ಕಿ.ಮೀ. ಇದ್ದು, ಇದರಲ್ಲಿ 10 ಕಿ.ಮೀ. ಕೆಲಸವಾಗಿದೆ. ದೇವಘಾಟ್ ಮೇಲ್ಗಣ ಕಾಲುವೆ 8 ಕಿ.ಮೀ., ಕೆಳಗಣ ಕಾಲುವೆ 8.44 ಕಿ.ಮೀ. ಕೆಲಸ ಆಗಬೇಕಾಗಿದ್ದು, ಎರಡೂ ಸೇರಿ ನಾಲ್ಕು ಕಿ.ಮೀ.ನಷ್ಟು ಕಾಮಗಾರಿಯಷ್ಟೇ ನಡೆದಿದೆ.
ದಿನನಿತ್ಯ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆ ಕಾಮಗಾರಿ ಪರಿಶೀಲಿಸುತ್ತಿದ್ದು ಸದ್ಯ ಕಳಪೆ ಕಾಮಗಾರಿ ನಡೆಯುತ್ತಿಲ್ಲ. ರೈತರು ಸಂಘಟನೆಯವರು ಕಳಪೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದರೆ ಸರಿಪಡಿಸಲಾಗುತ್ತೆ.–ಎಸ್.ಎಂ ಗೋಡಕರ್ ಇಇ ನೀರಾವರಿ ಇಲಾಖೆ ವಡ್ಡರಹಟ್ಟಿ
ಸಾಣಾಪುರ ಹನುಮನಹಳ್ಳಿ ಭಾಗದ ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿ ಕಾಲುವೆ ಮಧ್ಯೆ ಕಲ್ಲು ಬಂಡೆಗಳು ಸಾಕಷ್ಟು ಬಂದಿದ್ದು ಅವುಗಳನ್ನು ತೆರವುಗೊಳಿಸದೆ ಅರೆಬರೆ ಕೆಲಸ ಮಾಡಲಾಗಿದೆ. ಈ ಕೆಲಸ ಅವೈಜ್ಞಾನಿಕವಾಗಿದೆ.–ಬೆಟ್ಟಪ್ಪ, ಕಾನೂನು ಪದವಿ ವಿದ್ಯಾರ್ಥಿ ಸಾಣಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.