ಅಳವಂಡಿ: ‘ದೇಶವನ್ನು ಕುಷ್ಠರೋಗ ಮುಕ್ತ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಕುಷ್ಠರೋಗ ಪತ್ತೆಗೆ ಸಮೀಕ್ಷೆ ನಡೆಸಲಿದ್ದಾರೆ. ಗ್ರಾಮಸ್ಥರು ಮಾಹಿತಿ ನೀಡಿ ಸಹಕರಿಸಿ’ ಎಂದು ವೈದ್ಯಾಧಿಕಾರಿ ಚಂದ್ರಶೇಖರ ಮೇಟಿ ಹೇಳಿದರು.
ಇಲ್ಲಿನ ಸಿದ್ದೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಅಳವಂಡಿ ವತಿಯಿಂದ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ದೇಹದ ಯಾವುದೇ ಭಾಗದಲ್ಲಿ ತಾಮ್ರ ಅಥವಾ ಬಿಳಿ ಬಣ್ಣದ ಮಚ್ಚೆ, ಸ್ಪರ್ಶಜ್ಞಾನ ಇಲ್ಲದೇ ಇರುವುದು, ಪಾದಗಳು, ಬೆರಳುಗಳು ದೌರ್ಬಲ್ಯ ಹೊಂದಿದ್ದಲ್ಲಿ ಹಾಗೂ ಕಣ್ಣುಗಳು ಮುಚ್ಚುವಲ್ಲಿ ತೊಂದರೆಯಾಗುವುದು. ನಡೆಯುವಾಗ ಕಾಲು ಎಳೆಯುವುದು, ಅಂಗೈ ಅಥವಾ ಪಾದಗಳಲ್ಲಿ ಶೀತ, ಬಿಸಿ ಸಂವೇದನೆ ನಷ್ಟವಾಗುವದು ರೋಗದ ಲಕ್ಷಣವಾಗಿವೆ ಎಂದ ಅವರು ಅ.14ರವರೆಗೆ ಅಭಿಯಾನ ನಡೆಯಲಿದೆ’ ಎಂದರು.
ಆರೋಗ್ಯ ನೀರಿಕ್ಷಣಾಧಿಕಾರಿ ರವೀಂದ್ರ ಕಮ್ಮಾರ, ಪಿಎಚ್‌ಸಿಒ ಸಾವಿತ್ರಿ ಹಂಚಿನಾಳ, ರಾಜೇಶ್ವರಿ ಕಂಪ್ಲಿ, ದಿಲ್‌ಖುಷಬೂ, ಎಚ್‌ಐಒ ಬಸಪ್ಪ ಗಾಳಿ, ಸಿಎಚ್‌ಒ ಸಾವಿತ್ರಿ ಹಿರೇಮಠ, ಅಂಗನವಾಡಿ ಮೇಲ್ವಿಚಾರಕಿ ರೆಹಮತ್‌ಬೀ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕುಷ್ಠರೋಗದ ಬಗೆಗಿನ ಜಾಗೃತಿ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.