ADVERTISEMENT

ಕಳಪೆ ಬಿತ್ತನೆ ಬೀಜ; ಶಿಸ್ತು ಕ್ರಮಕ್ಕೆ ಸೂಚನೆ

ಕೆಡಿಪಿ ಸಭೆ: ಲೆಕ್ಕ ಕೊಡದ ಕಿಮ್ಸ್‌, ಟೆಂಡರ್‌ ಕರೆಯದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಚಾಟಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:32 IST
Last Updated 19 ಜೂನ್ 2024, 15:32 IST
ಕೊಪ್ಪಳದಲ್ಲಿ ಬುದವಾರ ನಡೆದ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಕೊಪ್ಪಳದಲ್ಲಿ ಬುದವಾರ ನಡೆದ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು   

ಕೊಪ್ಪಳ: ‘ಜಿಲ್ಲೆಯಲ್ಲಿ ಪ್ರಸ್ತುತ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ರೈತರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರ ಪೂರೈಸಬೇಕು. ಕಳೆದ ವರ್ಷ ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ‘ಹಲವು ಕಂಪನಿಗಳು ಪೂರೈಕೆ ಮಾಡಿರುವ ಬಿತ್ತನೆ ಬೀಜಗಳು ಕಳಪೆ ಎಂದು ಕೃಷಿ ಇಲಾಖೆಯವರೇ ಹೇಳಿದ್ದಾರೆ. ಆದರೂ ತಪ್ಪಿತಸ್ಥರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರು ಕೂಡ ಯಾಕೆ ಸುಮ್ಮನಿದ್ದಾರೆ’ ಎಂದು ಪ್ರಶ್ನಿಸಿದರು.

'ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರ ಬೇಡಿಕೆಯನ್ವಯ ನಿಯಮಿತವಾಗಿ ಪೂರೈಸಬೇಕು. ಇದಕ್ಕಾಗಿ ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕಳಪೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಿದರೆ ಎಫ್‌ಐಆರ್ ದಾಖಲಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಮಧ್ಯ ಪ್ರವೇಶಿಸಿದ ಶಾಸಕ ರಾಘವೇಂದ್ರ ಹಿಟ್ನಾಳ ‘ಕಳಪೆ ಬಿತ್ತನೆ ಬೀಜ ನೀಡಿದ ಕಂಪನಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವುದು, ಕಾನೂನು ಕ್ರಮ ಜರುಗಿಸುವುದು ಸಾಮಾನ್ಯ ಪ್ರಕ್ರಿಯೆ ಎನ್ನುವಂತಾಗಿದೆ. ಅವರನ್ನು ಪೊಲೀಸರು ವಿಚಾರಣೆ ಮಾಡಬೇಕು. ರೈತರಿಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು‘ ಎಂದರು.

ಚಾಟಿ: ಸಿದ್ದಾಪುರದಲ್ಲಿ ಕೆಆರ್‌ಐಡಿಎಲ್‌ನಿಂದ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರ ಕಾಮಗಾರಿ ಕಳಪೆಯಾಗಿದೆ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದ ಸಚಿವ ತಂಗಡಗಿ ಈ ಬಗ್ಗೆ ಅನುಷ್ಠಾನ ಏಜೆನ್ಸಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ನಿರ್ಮಾಣ ಕಾಮಗಾರಿಗೆ ತಗುಲಿದ ವೆಚ್ಚವನ್ನು ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನೆ ಮಾಡಬೇಕು. ಈ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ಅವರಿಗೆ ಸೂಚಿಸಿದರು.

ತಾವರಗೇರಾ ವ್ಯಾಪ್ತಿಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ‌ ಸಿಗದೆ ಗರ್ಭಿಣಿ ಸಾವನ್ನಪ್ಪಿದ್ದ ಪ್ರಕರಣದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲಿನ ವೈದ್ಯೆಗೆ ಎಚ್ಚರಿಕೆ ನೀಡುತ್ತೇನೆ. ಮುಂದಿನ ದಿನಗಳಲ್ಲಿ ತಮ್ಮ ಕಾರ್ಯ ವೈಖರಿಯಲ್ಲಿ ಬದಲಾವಣೆ ಆಗದಿದ್ದರೆ ವರ್ಗಾವಣೆ ಮಾಡಲಾಗುವುದು ಎಂದು ಸಚಿವರು ಡಿಎಚ್‌ಒ ಡಾ.ಲಿಂಗರಾಜು ಟಿ. ಅವರಿಗೆ ಹೇಳಿದರು.

ಜಿಲ್ಲೆಯಲ್ಲಿ ಖಾಲಿಯಿರುವ 68 ವೈದ್ಯರನ್ನು ಕೂಡಲೇ ಭರ್ತಿ ಮಾಡುವ ಸಂಬಂಧ‌ ಕ್ರಮಕೈಗೊಳ್ಳಬೇಕು. ಜನರ ಅನುಕೂಲಕ್ಕಾಗಿ ಖಾಲಿ‌ ಇರುವ ಹುದ್ದೆಗಳಿಗೆ ತುರ್ತಾಗಿ ನಿವೃತ್ತ ವೈದ್ಯರನ್ನು ನೇಮಿಸಿಕೊಂಡು ನಿತ್ಯ ಮೂರ್ನಾಲ್ಕು ತಾಸು ಕೆಲಸ ಮಾಡಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಿ ಎಂದು ಹೇಳಿದರು. ಕೊನೆಯಲ್ಲಿ ವಿವಿಧ ಇಲಾಖೆಗಳ ಬಗ್ಗೆಯೂ ಪ್ರಗತಿ ಪರಿಶೀಲನೆ ನಡೆಯಿತು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ದೊಡ್ಡನಗೌಡ ಪಾಟೀಲ, ಜನಾರ್ದನ ರೆಡ್ಡಿ, ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಕೆ.ಡಿ.ಪಿ. ನಾಮನಿರ್ದೇಶಿತ ಸದಸ್ಯರಾದ ರವಿ ಕುರುಗೋಡ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಉಪವಿಭಾಗಾಧಿಕಾರಿ  ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿ.ಪಂ. ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಸೇರಿದಂತೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೊಪ್ಪಳದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವರದಿ ತೋರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಾಸಕರು ಹಾಗೂ ಅಧಿಕಾರಿಗಳು ಇದ್ದಾರೆ

ಜಿಲ್ಲಾಸ್ಪತ್ರೆ ಸಮಸ್ಯೆ; ‘

ಪ್ರಜಾವಾಣಿ’ ವರದಿ ಪ್ರಸ್ತಾಪ ಕಿಮ್ಸ್‌ ಅಧೀನದ ಜಿಲ್ಲಾಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ’ಜಿಲ್ಲಾಸ್ಪತ್ರೆಯಲ್ಲಿ ಅನೇಕ ಸಮಸ್ಯೆಗಳಿದ್ದರೂ ವೈದ್ಯರು ಸ್ಪಂದಿಸುತ್ತಿಲ್ಲ. ಸರಿಯಾಗಿ ಗಾಳಿಯ ವ್ಯವಸ್ಥೆಯೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹೇಳಿಕೆಗೆ ಕಿಮ್ಸ್‌ ನಿರ್ದೇಶಕ ವಿಜಯನಾಥ ಇಟಗಿ ’ಎಲ್ಲಕ್ಕಿಂತಲೂ ಉತ್ತಮ ಸೇವೆ ನೀಡುತ್ತಿದ್ದೇವೆ’ ಎಂದರು. ಇದಕ್ಕೆ ಆಕ್ರೋಶಗೊಂಡ ಸಚಿವ ತಂಗಡಗಿ ’ನಿಮ್ಮ ಬೆನ್ನನ್ನು ನೀವೇ ಚಪ್ಪರಿಸಿಕೊಳ್ಳಬೇಡಿ. ಸೇವೆ ಚೆನ್ನಾಗಿ ನೀಡುತ್ತಿದ್ದಾರೆಂದು ಜನ ಹೇಳಬೇಕು. ನಿನ್ನ ಬಗ್ಗೆ ಒಂದು ಇತಿಹಾಸದ ಪುಸ್ತಕ ಇದೆ. ಪ್ರತಿ ದಿನ ಕಿಮ್ಸ್ ಅವ್ಯವಹಾರದ ಬಗ್ಗೆ ಮಾಧ್ಯಮಗಳಲ್ಲಿ‌ ಸುದ್ದಿ ಬಿತ್ತರವಾಗುತ್ತಿದೆ. ಮನುಷ್ಯತ್ವದಿಂದ ಕೆಲಸ ಮಾಡುವುದನ್ನು ಕಲಿಯಿರಿ’ ಎಂದು ಹರಿಹಾಯ್ದರು. ‘ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಬೆಡ್ ಸಮಸ್ಯೆ ಮೂಲಸೌಕರ್ಯ ಕೊರತೆ ನಿವಾರಣೆಯಾಗುತ್ತಿಲ್ಲ. ಶಸ್ತ್ರಚಿಕಿತ್ಸೆಗೆ ತಿಂಗಳಾನುಗಟ್ಟಲೇ ಸಮಯ ಕೊಡುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಕಿಮ್ಸ್‌ ವಾರ್ಷಿಕ ಆರ್ಥಿಕ ವೆಚ್ಚದ ಬಗ್ಗೆ ಸಮರ್ಪಕ ಮಾಹಿತಿ ನೀಡದ್ದಕ್ಕೆ ಸಿಡಿಮಿಡಿಗೊಂಡ ಶಾಸಕ ರಾಘವೇಂದ್ರ ಹಿಟ್ನಾಳ ‘ಕೆಡಿಪಿ ಸಭೆಗೆ ಬರುವಾಗ ವಾರ್ಷಿಕ ಆರ್ಥಿಕ ವೆಚ್ಚದ ಬಗ್ಗೆ ಮಾಹಿತಿ ನೀಡಬೇಕು. ಇಂತಹ ಮಾಹಿತಿ ಇಲ್ಲದೆ ಸಭೆಗೆ ಯಾಕೆ ಬರುತ್ತೀರಿ. ಕೋಟ್ಯಂತರ ರೂಪಾಯಿಗೆ ಲೆಕ್ಕವೇ ಇಲ್ಲವೆಂದರೆ ಹೇಗೆ’ ಎಂದು ಪ್ರಶ್ನಿಸಿದರು.

Cut-off box - ‘ಕನ್ನಡದಲ್ಲಿ ಮಾತಾಡ್ರೀ’ ಕಿಮ್ಸ್‌ ನಿರ್ದೇಶಕ ವಿಜಯನಾಥ ಇಟಗಿ ಆಸ್ಪತ್ರೆಯ ಕುರಿತು ವೈದ್ಯಕೀಯ ಪದಗಳ ಬಳಕೆಯನ್ನು ಇಂಗ್ಲಿಷ್‌ನಲ್ಲಿ ಮಾಡಿದಾಗ ’ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಿದ್ದೇನೆ. ಕನ್ನಡದಲ್ಲಿ ಮಾತಾಡ್ರೀ ನೀವು ಇಂಗ್ಲಿಷ್‌ನಲ್ಲಿ ಮಾತಾಡಿದ್ರ ಮಾಧ್ಯಮದವರು ಬರೆದು ಬಿಡ್ತಾರೆ. ಅವರಿಗಿಂತ ಬಿಜೆಪಿ ಮಿತ್ರರು ಆಡಿಕೊಳ್ಳುತ್ತಾರೆ’ ಎಂದಾಗ ಸಭೆಯಲ್ಲಿ ನಗೆಯ ಅಲೆ ಕಂಡು ಬಂದಿತು.

Cut-off box - ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು * ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರಕ್ಕೆ ಮಾರುಕಟ್ಟೆ ಸೃಷ್ಟಿಸಲು ಸಿರವಾರದ ಸುತ್ತಲಿನ ಪ್ರದೇಶದಲ್ಲಿ ತೋಟಗಾರಿಕಾ ಪಾರ್ಕ್‌ ನಿರ್ಮಾಣಕ್ಕೆ 194 ಎಕರೆ ಜಮೀನು ಗುರುತಿಸಲಾಗಿದ್ದು ಇದರಲ್ಲಿ 120 ಎಕರೆ ಪ್ರದೇಶ ಸರ್ಕಾರದ್ದಾಗಿದೆ. ಉಳಿದ ಜಮೀನು ಮಾಲೀಕರಿಂದ ಖರೀದಿಸಬೇಕಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು. * ಜಮೀನು ನೀಡಲು ರೈತರು ಮೀನಮೇಷ ಮಾಡುತ್ತಿರುವುದರಿಂದ ಅವರೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ. ಆಗಲೂ ಒಪ್ಪದಿದ್ದರೆ ಭೂ ಸ್ವಾಧೀನ ಮಾಡಬೇಕು. ಅದಕ್ಕೂ ಮೊದಲು ಖಾಸಗಿ ಅವರಿಂದ ತೋಟಗಾರಿಕೆ ಪಾರ್ಕ್ ನಿರ್ಮಾಣದಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಮಾರುಕಟ್ಟೆ ಸ್ಥಾಪಿಸಲು ಕ್ರಮ ವಹಿಸಬೇಕು. * ಕಾರಟಗಿ ಕನಕಗಿರಿ ಹಾಗೂ ಕುಕನೂರು ತಾಲ್ಲೂಕಿನಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಲು ಅನುಮೋದನೆ. ಈಗಾಗಲೇ ಕಾರಟಗಿಯಲ್ಲಿ‌ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ‌ ಕೂಡ ಗುರುತಿಸಲಾಗಿದೆ. ಕನಕಗಿರಿ ಹಾಗೂ ಕುಕನೂರಿನಲ್ಲೂ ಸ್ಥಳ ಗುರುತಿಸಿ ಪ್ರಸ್ತಾವ ಸಲ್ಲಿಸಲು ಸಚಿವರ ಸೂಚನೆ. * ಕಿಮ್ಸ್‌ನಲ್ಲಿ ಎಸ್‌ಸಿಪಿ ಹಾಗೂ ಟಿಎಸ್‌ಟಿ ಅನುದಾನದಲ್ಲಿ ಕಿಯೋನಿಕ್ಸ್ ಮೂಲಕ ಲ್ಯಾಪಟಾಪ್‌ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ಬಂದಿದ್ದು ಸಾಮಗ್ರಿ ಖರೀದಿಗೆ ಸೂಕ್ತ ದಾಖಲೆ ಒದಗಿಸಬೇಕು ಎಂದು ನಿರ್ದೇಶನ ನೀಡಿದ ಶಿವರಾಜ ತಂಗಡಗಿ. *ಗಂಗಾವತಿ ಹಾಗೂ ಕುಷ್ಟಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಸಿ.ಟಿ. ಸ್ಕ್ಯಾನ್‌ ಯಂತ್ರಗಳ ನಿರ್ವಹಣೆಗೆ ನೇಮಕಗೊಂಡಿದ್ದ ಸಿಬ್ಬಂದಿಗೆ ಬಾಕಿ ಇರುವ ವೇತನ ಪಾವತಿಗೆ ಕ್ರಮ ವಹಿಸಲು ನಿರ್ದೇಶನ. *ಕಿಮ್ಸ್ ನೋಂದಣಿ ನವೀಕರಣ ಬಾಕಿ ಇದ್ದು ಇದರಿಂದ ಕಿಮ್ಸ್‌ಗೆ ₹35 ಲಕ್ಷ ದಂಡ ವಿಧಿಸಲಾಗಿದೆ. ಇದರಲ್ಲಿ ಕಿಮ್ಸ್ ನಿರ್ದೇಶಕರ ಕರ್ತವ್ಯ ಲೋಪ ಕಂಡುಬರುತ್ತಿದ್ದು ಸಮಿತಿ ರಚಿಸಿ 15 ದಿನಗಳೊಳಗೆ ವರದಿ ಸಲ್ಲಿಸಬೇಕು. * ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದ್ದರೂ ಬಸ್‌ಗಳ ಕೊರತೆಯಿದೆ. ಆದಾಯ ಹೆಚ್ಚಾಗಿದೆ ಎಂದು ಬೀಗಬೇಕು. ವಿದ್ಯಾರ್ಥಿಗಳ ಅನುಕೂಲವಾಗುವ ರೀತಿಯಲ್ಲಿ ಇನ್ನಷ್ಟು ಬಸ್‌ಗಳನ್ನು ಒದಗಿಸಿ ಎಂದು ಆಗ್ರಹಿಸಿದ ಹೇಮಲತಾ ನಾಯಕ. *ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿ ಹಾಗೂ ಡಿ ಗ್ರೂಪ್‌ ಸಿಬ್ಬಂದಿ ನೇಮಕಾತಿಗೆ ಪ್ರತಿವರ್ಷವೂ ಟೆಂಡರ್‌ ಕರೆಯಬೇಕು ಎನ್ನುವ ನಿಯಮವಿದ್ದರೂ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಟೆಂಡರ್‌ ಕರೆಯುತ್ತಾರೆ. 12 ವರ್ಷಗಳಿಂದ ಈ ಕೆಲಸವಾಗಿಲ್ಲ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಶಂಕೆಯಿದೆ ಎಂದು ಆರೋಪಿಸಿದ ಶಾಸಕ ರಾಘವೇಂದ್ರ ಹಿಟ್ನಾಳ.

Cut-off box - ಇಬ್ಬರ ಅಮಾನತಿಗೆ ಶಿಫಾರಸು ಕರ್ತವ್ಯ ಲೋಪ ಎಸಗಿದ ಆರ್‌ಟಿಒ ಲಕ್ಷ್ಮಿಕಾಂತ್‌ ಮತ್ತು ಡಿಡಿಎಲ್‌ಆರ್‌ ಅಧಿಕಾರಿ ದೇವರಾಜ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.