ಗಂಗಾವತಿ: ಲಾಕ್‌ಡೌನ್‌ನಿಂದಾಗಿ ಎಲ್ಲಾ ವರ್ಗದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಇದಕ್ಕೆ ಖಾಲಿ ಚೀಲ ಹೊಲೆಯುವ ಕಾರ್ಮಿಕರೂ ಕೂಡ ಹೊರತಾಗಿಲ್ಲ.
ಇಲ್ಲಿನ ಎಪಿಎಂಸಿ ಸೇರಿದಂತೆ ನಗರದಲ್ಲಿ ಹಲವು ವರ್ಷಗಳಿಂದ 150ಕ್ಕೂ ಹೆಚ್ಚು ಕುಟುಂಬಗಳು ಖಾಲಿ ಚೀಲವನ್ನು ಹೊಲಿದು ಜೀವನ ನಡೆಸುತ್ತಿದ್ದಾರೆ. ನಿತ್ಯ ಖಾಲಿ ಚೀಲ ಹೊಲಿದು ಅದರಿಂದ ಬರುವ ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಇವರು ಲಾಕ್ ಡೌನ್ ಸಮಯದಲ್ಲಿ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಲಾಕ್ ಡೌನ್ ಸಡಿಲಿಕೆ ಆದ ಬೆನ್ನಲ್ಲೇ ತಮ್ಮ ಮೂಲ ವೃತ್ತಿಗೆ ಮರಳಿರುವ ಕೂಲಿಕಾರರು, ಕ್ರಮೇಣ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ನಿತ್ಯ 150 ರಿಂದ 200 ಕ್ಕೂ ಹೆಚ್ಚು ಹರಿದ ಖಾಲಿ ಚೀಲಗಳನ್ನು ಹೊಲಿದು ಅದರಿಂದ ಬರುವ ಹಣದಿಂದ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಒಂದು ಚೀಲ ಹೊಲಿದರೆ ₹ 2 ಮಾತ್ರ ಸಿಗುತ್ತದೆ. ನಿತ್ಯ 150 ಚೀಲಗಳನ್ನು ಹೊಲಿದರೆ ₹ 300 ಸಿಗಲಿದೆ.
‘ ಲಾಕ್‌ಡೌನ್ ದಿನಗಳನ್ನು ನನೆದರೆ ಕಣ್ಣೀರು ಬರುತ್ತದೆ. ಕೆಲಸವಿಲ್ಲದೆ, ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿಯಲ್ಲಿ ಯಾರೂ ನೆರವಿಗೆ ಬರಲಿಲ್ಲ. ನಿತ್ಯ ಊಟಕ್ಕೂ ಪರಿತಪಿಸುವಂತಾಗಿತ್ತು. ಸಾಕಷ್ಟು ಜನರಿಗೆ ಆಹಾರದ ಕಿಟ್ ಗಳನ್ನು ಹಂಚಿದ ಜನಪ್ರತಿನಿಧಿಗಳ ಕಣ್ಣಿಗೂ ನಾವು ಬೀಳಲಿಲ್ಲ. ಸರ್ಕಾರ ಕೂಡ ನಮ್ಮ ನೆರವಿಗೆ ಬರಲಿಲ್ಲ‘ ಎಂದು ಕೂಲಿ ಕಾರ್ಮಿಕ ಹನುಮಂತಪ್ಪ ಅಳಲು ತೊಡಿಕೊಂಡರು.
ವರ್ಷದಲ್ಲಿ ಕೇವಲ ಮೂರರಿಂದ ನಾಲ್ಕು ತಿಂಗಳು ಮಾತ್ರ ಇವರಿಗೆ ಕೆಲಸ ಸಿಗುತ್ತದೆ. ಉಳಿದ ತಿಂಗಳಲ್ಲಿ ದುಡಿಮೆಗೆ ಬೇರೆ ಊರುಗಳಿಗೆ ತೆರಳಿ ಬದುಕು ಕಟ್ಟಿಕೊಳ್ಳುತ್ತಾರೆ.
’ಕೊವೀಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನಡಿ ಸಾಕಷ್ಟು ವಲಯಗಳಿಗೆ ಆರ್ಥಿಕ ನೆರವು ಘೋಷಣೆ ಮಾಡಿದೆ. ಆದರೆ ಅದರಲ್ಲಿ ಖಾಲಿ ಚೀಲ ಹೊಲಿಯುವವರನ್ನು ಪರಿಗಣಿಸಿಲ್ಲ. ಹಾಗಾಗಿ ನಮಗೂ ಕೂಡ ಆರ್ಥಿಕ ನೆರವು ನೀಡಿದರೇ ಅನುಕೂಲವಾಗುತ್ತದೆ‘ ಎಂದು ಖಾಲಿ ಚೀಲ ಹೊಲಿಯುವವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.