ಕುಕನೂರು: ತಾಲ್ಲೂಕಿನಲ್ಲಿ ನರೇಗಾ ಯೋಜನೆಯ ಮಾನವ ದಿನಗಳನ್ನು ಸೃಜಿಸುವಲ್ಲಿ ಗ್ರಾಮ ಪಂಚಾಯಿತಿಗಳು ಉತ್ತಮ ಸಾಧನೆ ಮಾಡಿವೆ.
ತಾಲ್ಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳು ಸೇರಿ ಒಟ್ಟು 4,10,000 ವಾರ್ಷಿಕ ಗುರಿ ಇದ್ದು, ಕೆಲಸ ಕೇಳಿ ಬಂದ ಕೂಲಿಕಾರರಿಗೆ ತಕ್ಷಣ ಕೂಲಿ ಕೆಲಸ ನೀಡುವುದರೊಂದಿಗೆ ಇದೇ ಪ್ರಥಮ ಬಾರಿಗೆ, ಕೇವಲ ಎರಡು ತಿಂಗಳಲ್ಲಿ ವಾರ್ಷಿಕ ಗುರಿಯ ಶೇಕಡಾ 53ರಷ್ಟು ಅಂದರೆ 2.20 ಲಕ್ಷ ಮಾನವ ದಿನ ಸೃಜನೆ ಸಾಧ್ಯವಾಗಿದೆ.
‘ಗ್ರಾಮೀಣ ಕುಟುಂಬಗಳ ಕೂಲಿಕಾರರ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವುದು. ಪ್ರತೀ ಕುಟುಂಬಕ್ಕೆ, ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಕೆಲಸದ ಖಾತ್ರಿ, ಕುಟುಂಬದ ವಯಸ್ಕ ಸದಸ್ಯರು ಕೆಲಸ ಅರಸಿ ಬೇರೆ ಕಡೆ ಗುಳೆ ಹೊಗಬಾರದು, ಗ್ರಾಮೀಣ ಪ್ರದೇಶದಲ್ಲಿಯೇ ತಮ್ಮ ಉತ್ತಮ ಜೀವನ ನಿರ್ವಹಣೆಯ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳು ಮತ್ತು ವೈಯಕ್ತಿಕ ಹಾಗೂ ಸಮುದಾಯ ಆಸ್ತಿಗಳನ್ನು ಸೃಜನೆ ಮಾಡುವಲ್ಲಿ ನರೇಗಾ ಯೋಜನೆ ಅನುಕೂಲವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್ ಹೇಳಿದರು.
ಗುರಿ ಮೀರಿ ಸಾಧಿಸಿದ ಯರೇಹಂಚಿನಾಳ ಗ್ರಾ.ಪಂ: ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಸಕ್ರಿಯ ಕೂಲಿಕಾರರ ಸಂಖ್ಯೆಗೆ ಅನುಗುಣವಾಗಿ ತಿಂಗಳವಾರು ಮತ್ತು ವಾರ್ಷಿಕ ಮಾನವ ದಿನಗಳ ಗುರಿ ನಿಗದಿಮಾಡಲಾಗಿತ್ತು. 2024ರ ಮೇ ಅಂತ್ಯಕ್ಕೆ 15 ಗ್ರಾಮ ಪಂಚಾಯತಿಗಳಲ್ಲಿ 14 ಗ್ರಾಮ ಪಂಚಾಯತಿಗಳು ಶೇಕಡ ನೂರಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ. ಅದರಲ್ಲಿ ಯರೇಹಂಚಿನಾಳ ಗ್ರಾಮ ಪಂಚಾಯತಿಯ ವಾರ್ಷಿಕ ಗುರಿ 14,563 ಇದ್ದು, ಕೇವಲ 2 ತಿಂಗಳಲ್ಲಿ 19,987 ಮಾನವ ದಿನಗಳನ್ನು ಸೃಜನೆ ಮಾಡಿ ಶೇಕಡ 137 ಸಾಧನೆ ಮಾಡಿದೆ.
ಕುದರಿಮೋತಿ ಗ್ರಾಮ ಪಂಚಾಯತಿಯು ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡುವುದರೊಂದಿಗೆ 32,286 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ವಾರ್ಷಿಕ ಗುರಿಯ ಶೇಕಡ 79 ಸಾಧನೆ ಮಾಡಿ, ತಾಲ್ಲೂಕಿನಲ್ಲಿ ಅತೀ ಹೆಚ್ಚು ಕೂಲಿಕಾರರಿಗೆ ಕೆಲಸ ನೀಡಿದ ಗ್ರಾಮ ಪಂಚಾಯಿತಿಗಳಾಗಿವೆ.
ತಾಲ್ಲೂಕಿನ ತಳಕಲ್ ಮತ್ತು ಮಂಗಳೂರು ಗ್ರಾಮ ಪಂಚಾಯಿತಿಗಳು ಮಹಿಳಾ ಕೂಲಿಕಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ನೀಡುವುದರೊಂದಿಗೆ ರಾಜ್ಯ ಆಯುಕ್ತಾಲಯದ ನಿರ್ದೇಶನದಂತೆ ಶೇ 65 ಮಹಿಳಾ ಭಾಗವಹಿಸುವಿಕೆ ಸಾಧನೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.