ADVERTISEMENT

ಯುವತಿ ಆತ್ಮಹತ್ಯೆ: ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ, ದಂಡ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 16:10 IST
Last Updated 26 ಜೂನ್ 2024, 16:10 IST
<div class="paragraphs"><p>ಬಂಧನ</p></div>

ಬಂಧನ

   

ಕನಕಗಿರಿ: ತನ್ನನ್ನು ಪ್ರೀತಿಸು ಎಂದು ದುಂಬಾಲು ಬಿದ್ದಿದ್ದ ನವಲಿ ತಾಂಡದ ಕುಮಾರ ಯಂಕಪ್ಪ ರಾಠೋಡ್ ಅವರ ಕಿರುಕುಳಕ್ಕೆ ಬೇಸತ್ತು ಗೀತಾ ಎಂಬ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಯುವಕನಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಬುಧವಾರ ಆದೇಶ ನೀಡಿದ್ದಾರೆ.

ಗೀತಾ ಮನೆಯಿಂದ ಕಾಲೇಜಿಗೆ ಹೋಗುವಾಗ ಹಾಗೂ ಬರುವಾಗ ನಿನ್ನನ್ನು ಲವ್ ಮಾಡುತ್ತೇನೆ, ಬಿಡುವುದಿಲ್ಲ ಎಂದು ಕುಮಾರ ರಾಠೋಡ್ ದಿನಲೂ ಸತಾಯಿಸುತ್ತಿದ್ದ. ಗ್ರಾಮದ ಹಿರಿಯರು ಬುದ್ದಿವಾದ ಹೇಳಿದರೂ ಆರೋಪಿ ಕೇಳದೇ ಪದೇ ಪದೇ ತನ್ನ ಕಿರುಕುಳವನ್ನು ಮುಂದುವರೆಸಿದ್ದ.

ADVERTISEMENT

2018ರ ಜನೆವರಿ 3 ರಂದು ಗೀತಾ ಆಸ್ಪತ್ರೆಗೆ ಹೋಗಿ ಮನೆಗೆ ಬರುವಾಗ ಆರೋಪಿ ಗೀತಾಳ ಕೈಹಿಡಿದು ಎಳೆದಾಡಿದ್ದು ಅಪರಾಧಿ ಕೈಯಿಂದ ತಪ್ಪಿಸಿಕೊಂಡು ಬಂದು ನಡೆದ ಘಟನೆ ಬಗ್ಗೆ ತಾಯಿಗೆ ತಿಳಿಸಿದ್ದಳು. ಜನವರಿ 4ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಡೆತ್ ನೋಟ್ ಬರೆದು ‘ತನ್ನ ಸಾವಿಗೆ ಕುಮಾರ ರಾಠೋಡ್ ಕಾರಣ, ನನಗೆ ಇಷ್ಟವಿಲ್ಲದಿದ್ದರೂ ಪ್ರೀತಿಸು ಎಂದು ಒತ್ತಾಯ ಮಾಡುತ್ತಿದ್ದಾನೆ, ಹೊರಗಡೆ ಹೋಗಲು ಭಯವಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನ ಎಂಬುದು ಗೊತ್ತಿದ್ದರೂ ಬೇರೆ ದಾರಿಯ ಇಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು  ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಳು. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆತ್ಯಹತ್ಯೆಗೆ ಪ್ರಚೋದನೆ ಕಾರಣ ಎಂದು ತನಿಖೆ ಹಾಗೂ ಸಾಕ್ಷಾಧಾರಗಳಿಂದ ಖಚಿತಪಟ್ಟಿದ್ದರಿಂದ ಆರೋಪಿ ವಿರುದ್ಧ ತನಿಖಾಧಿಕಾರಿ ನಾಗನಗೌಡ ಪಾಟೀಲ ಅವರು ನ್ಯಾಯಾಲಯಕ್ಕೆ ದೋಷರೋಪ ಪತ್ರ ಸಲ್ಲಿಸಿದ್ದರು.

ಈ ಪ್ರಕರಣವು ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಸಾಕ್ಷಿದಾರರ ಸಾಕ್ಷ್ಯ, ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಧೀಶ ಸದಾನಂದ ನಾಯಕ ಅವರು ಆರೋಪಿ ತಪ್ಪಿತಸ್ಥ ಎಂದು ಆದೇಶ ನೀಡಿದ್ದಾರೆ

ಐದು ವರ್ಷಗಳ ಕಠಿಣ ಕಾರಾಗೃಹದ ಶಿಕ್ಷೆ, ಮೂರು ತಿಂಗಳೊಳಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಒಂದು ಲಕ್ಷ ರೂಪಾಯಿಯಲ್ಲಿ 90 ಸಾವಿರ ರೂಪಾಯಿ ಮೃತಳ ತಾಯಿಗೆ ಹಾಗೂ ಹತ್ತು ಸಾವಿರ ರೂಪಾಯಿ ಸರ್ಕಾರಕ್ಕೆ ನೀಡಬೇಕು. ಒಂದು ವೇಳೆ ಪರಿಹಾರ ನೀಡದಿದ್ದರೆ 1 ವರ್ಷ ಹೆಚ್ಚುವರಿಯಾಗಿ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಬುಧವಾರ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮೀ ಎಸ್ ಅವರು ಗೀತಾಳ ಪರವಾಗಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.