ADVERTISEMENT

ರಾಜ್ಯಕ್ಕೆ ಉಂಡೆನಾಮ ಹಾಕಿದ ಬಜೆಟ್‌: ಕನಕಪ್ಪ ಮಳಗಾವಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 14:47 IST
Last Updated 24 ಜುಲೈ 2024, 14:47 IST
ಕನಕಪ್ಪ ಮಳಗಾವಿ
ಕನಕಪ್ಪ ಮಳಗಾವಿ   

ಕನಕಗಿರಿ: ಪ್ರಧಾ‌ನ ಮಂತ್ರಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಅಧಿಕಾರ ಹಿಡಿದ ಬಳಿಕ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಭಾರಿ ಅನ್ಯಾಯ ಮಾಡಲಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯಕ್ಕೆ ಉಂಡೆನಾಮ ಹಾಕಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಕೊಪ್ಪಳ ಜಿಲ್ಲಾಧ್ಯಕ್ಷ ಕನಕಪ್ಪ ಮಳಗಾವಿ ಕಿಡಿ ಕಾರಿದ್ದಾರೆ.

ಈ ಕುರಿತು ಹೇಳಿಕೆ‌ ನೀಡಿರುವ ಅವರು ಮೇಕೆದಾಟು ಸಮಾನಾಂತರ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಬಗ್ಗೆ ಯಾವುದೇ ಪ್ರಸ್ತಾವ ಮಾಡದೇ ರಾಜ್ಯಕ್ಕೆ ದ್ರೋಹ ಬಗೆಯಲಾಗಿದೆ ಎಂದು ಹೇಳಿದರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅದಕ್ಕೂ ಕೇಂದ್ರ ಸರ್ಕಾರ ಎಳ್ಳುನೀರು ಬಿಟ್ಟಿದೆ. ಬೆಂಗಳೂರಿನಲ್ಲಿ 60 ಕಿ.ಮೀ ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಕೂಡ ಪ್ರಸ್ತಾಪ ಮಾಡಿಲ್ಲ ಎಂದರು.

ADVERTISEMENT

ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಮೆಟ್ರೊ ಮಾರ್ಗ ವಿಸ್ತರಣೆ ಮಾಡುವ ಬಗ್ಗೆ ಮತ್ತು 44.65 ಕಿ.ಮೀ ಉದ್ದದ ಮೂರನೇ ಹಂತದ ಮೆಟ್ರೊ ಹಂತದ ವಿಸ್ತರಣೆ ಬಗ್ಗೆ ಕೂಡ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. 37 ಕಿ.ಮೀ. ಹೆಬ್ಬಾಳ-ಸರ್ಜಾಪುರ ಯೋಜನೆ ಬಗ್ಗೆ ಚಕಾರ ಎತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಿ ಸರ್ಕಾರ ಬೀಳುತ್ತದೋ ಎನ್ನುವ ಭಯದಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಇವರಿಗೆ ಸರ್ಕಾರ ಭದ್ರಪಡಿಸಿಕೊಳ್ಳಬೇಕೆ ಹೊರತು ಅಭಿವೃದ್ಧಿ ಬೇಕಿಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.