ಕೊಪ್ಪಳ: ‘ಜಿಲ್ಲೆ ಕಲೆಗಳ ತವರೂರು, ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿದೆ. ಕಲೆ, ಕ್ರೀಡಾ ಪ್ರತಿಭೆಗಳ ಗುಚ್ಛವೇ ಇಲ್ಲಿದೆ’ ಎನ್ನುವ ಮಾತುಗಳು ಎಲ್ಲರ ಭಾಷಣಗಳಲ್ಲಿ ಹೊರಹೊಮ್ಮುವುದು ಸಾಮಾನ್ಯ. ಇದು ನಿಜವೂ ಹೌದು.
ಸಾಂಸ್ಕೃತಿಕವಾಗಿ, ಕ್ರೀಡಾತ್ಮಕವಾಗಿ, ಕಲಾತ್ಮಕವಾಗಿ ವಿಶೇಷವಾಗಿ ಜಾನಪದ ರಂಗದಲ್ಲಿ ದೊಡ್ಡಮಟ್ಟದಲ್ಲಿ ಸಾಧನೆ ಮಾಡಿದ ಕಲಾವಿದರು ನಮ್ಮ ಜಿಲ್ಲೆಯಲ್ಲಿದ್ದಾರೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಈಗಿನ ಯುವಪೀಳಿಗೆ ಮಾತ್ರ ಜಿಡ್ಡುತನಕ್ಕೆ ಅಂಟಿಕೊಂಡಿದೆ. ಜಿಲ್ಲೆಯಲ್ಲಿ ಅನೇಕ ಚಟುವಟಿಕೆಗಳು ನಡೆದರೂ ಮೊಬೈಲ್ ದಾಸರಾಗಿ ಸಂಬಂಧವೇ ಇಲ್ಲವೆನ್ನುವ ಮನೋಭಾವನೆಯಿಂದ ಸುಮ್ಮನಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರಿ, ಮೊರಾರ್ಜಿ ದೇಸಾಯಿ, ಅನುದಾನಿತ ಹಾಗೂ ಅನುದಾನ ರಹಿತ ಹೀಗೆ ಒಟ್ಟು 105 ಪದವಿಪೂರ್ವ ಕಾಲೇಜುಗಳಿದ್ದು, ಹತ್ತಾರು ಪದವಿ ಕಾಲೇಜುಗಳಿವೆ. ಕೊಪ್ಪಳ ತಾಲ್ಲೂಕು ವ್ಯಾಪ್ತಿಯೊಂದರಲ್ಲಿಯೇ 29 ಪಿಯು ಕಾಲೇಜುಗಳಿವೆ. ಇವುಗಳ ಜೊತೆಗೆ ಡಿಪ್ಲೊಮೊ, ಐಟಿಐ ಕಾಲೇಜುಗಳು ಸಹ ಇವೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಮಾತ್ರ ಶೇ 1ರಷ್ಟು ಕೂಡ ಕಂಡುಬರುತ್ತಿಲ್ಲ.
ಇತ್ತೀಚೆಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ನೂರಾರು ಪದವಿಪೂರ್ವ ಕಾಲೇಜುಗಳು, ಹತ್ತಾರು ಪದವಿ ಕಾಲೇಜುಗಳಲ್ಲಿರುವ ಸಾವಿರಾರು ವಿದ್ಯಾರ್ಥಿಗಳ ಪೈಕಿ ಯುವಜನೋತ್ಸವದಲ್ಲಿ ಪಾಲ್ಗೊಂಡವರ ಸಂಖ್ಯೆ 200 ದಾಟಿರಲಿಲ್ಲ. ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಗೆಲುವು ಪಡೆದರೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ತಮ್ಮಲ್ಲಿನ ಪ್ರತಿಭೆ ತೋರಿಸಲು ಅವಕಾಶವಿದ್ದರೂ ಯುವಜನತೆ ಬಳಸಿಕೊಳ್ಳಲಿಲ್ಲ. ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಂಡರೆ ಕ್ರೀಡಾ ಇಲಾಖೆಯೇ ಖರ್ಚು ವೆಚ್ಚ ನೋಡಿಕೊಳ್ಳುತ್ತದೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದರೆ ಜಿಲ್ಲೆಯ ಕೀರ್ತಿ ಪತಾಕೆಯೂ ಹಾರುತ್ತದೆ.
ಇಲ್ಲಿನ ಯುವಜನೋತ್ಸವದಲ್ಲಿ ಜಾನಪದ ಗೀತೆಗಳು, ನೃತ್ಯಗಳು, ಕತೆ ಬರೆಯುವುದು, ಕವನ ಬರೆಯುವುದು ಹಾಗೂ ಚಿತ್ರಕಲೆ ಸ್ಪರ್ಧೆಗಳು ನಡೆದಿದ್ದರೂ ಪ್ರತಿ ವಿಭಾಗದಲ್ಲಿಯೂ ಕಡಿಮೆ ಸಂಖ್ಯೆಯಲ್ಲಿ ಯುವಜನತೆ ಪಾಲ್ಗೊಂಡಿದ್ದರು. ಇದೊಂದು ಉದಾಹರಣೆಯಷ್ಟೇ. ಕ್ರೀಡಾ ಇಲಾಖೆ ಕಳೆದ ವರ್ಷ ಯುವಜನೋತ್ಸವ ಆಯೋಜಿಸಿದ್ದಾಗಲೂ ಇದೇ ಪರಿಸ್ಥಿತಿ. ಸಂಘಟನೆಯ ಜವಾಬ್ದಾರಿ ಹೊತ್ತ ಸಂಸ್ಥೆಗಳು ಮಾಧ್ಯಮಗಳು, ಆಯಾ ಇಲಾಖೆಗಳ ಮುಖ್ಯಸ್ಥರ ಮೂಲಕ ಮಾಹಿತಿ ತಲುಪಿಸಿದರೂ ಕಾಲೇಜಿನ ಪ್ರಾಚಾರ್ಯರು ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರು ಗಂಭೀರವಾಗಿ ತೆಗೆದುಕೊಳ್ಳುತ್ತಲೇ ಇಲ್ಲ.
ಇದು ವಿದ್ಯಾರ್ಥಿಗಳ ಸಾಂಸ್ಕೃತಿಕ ಜಿಡ್ಡುತನಕ್ಕೆ ಸಾಕ್ಷಿಯಾದರೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಕೂಡ ಹಿಂದೇಟು ಹಾಕುವ ಸ್ಥಿತಿಯಿದೆ. ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ವಿಜಯಪುರದ ಅಕ್ಕಮಹಾದೇವಿ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಷಟಲ್ ಬ್ಯಾಡ್ಮಿಂಟನ್ ಟೂರ್ನಿ ನಡೆದಿತ್ತು. ಈ ವಿ.ವಿ. ಅಧೀನದಲ್ಲಿ 300ಕ್ಕೂ ಹೆಚ್ಚು ಮಹಿಳಾ ಕಾಲೇಜುಗಳು ರಾಜ್ಯದಾದ್ಯಂತ ಇದ್ದರೂ ಟೂರ್ನಿಯಲ್ಲಿ ಭಾಗವಹಿಸಿದ್ದು ಆರು ತಂಡಗಳು ಮಾತ್ರ.
ಇವು ಕೆಲವು ಉದಾಹರಣೆಗಳು ಮಾತ್ರ. ಪ್ರತಿ ವರ್ಷ ಆ.15, ಕಲ್ಯಾಣ ಕರ್ನಾಟಕ ಮಹೋತ್ಸವ ಅಂಗವಾಗಿ ಸೆ. 17 ಮತ್ತು ಕನ್ನಡ ರಾಜ್ಯೋತ್ಸವ ಅಂಗವಾಗಿ ನ.1 ರಾಷ್ಟ್ರಧ್ವಜಾರೋಹಣ ನಡೆಯುವ ಜಿಲ್ಲಾ ಕ್ರೀಡಾಂಗಣದಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ಕೂಡ ಪಾಲ್ಗೊಂಡಿರುವುದಿಲ್ಲ. ಈ ಬಗ್ಗೆ ಹಿಂದೆ ಅನೇಕ ಬಾರಿ ಚರ್ಚೆಗಳಾದ ಬಳಿಕ ಜಿಲ್ಲಾಡಳಿತವೇ ಬಸ್ ವ್ಯವಸ್ಥೆ ಮಾಡಿ ಆಯಾ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ವಾಪಸ್ ಬಿಟ್ಟು ಬರುವ ಕೆಲಸ ಮಾಡುತ್ತಿದೆ.
‘ಕನ್ನಡ ಮತ್ತು ಸಂಸ್ಕೃತಿ, ಕ್ರೀಡಾ ಇಲಾಖೆ ಹೀಗೆ ಸರ್ಕಾರದ ಅನೇಕ ಇಲಾಖೆಗಳು ಅವಕಾಶಗಳನ್ನು ಕೊಟ್ಟರೂ ಅದನ್ನು ಬಳಸಿಕೊಳ್ಳುವಲ್ಲಿ ಯುವಜನತೆ ಆಸಕ್ತಿ ತೋರಿಸುತ್ತಿಲ್ಲ. ಸೆಮಿಸ್ಟರ್ ಪರೀಕ್ಷೆಯ ಸವಾಲು, ಹಲವು ಶಾಲಾ, ಕಾಲೇಜುಗಳಲ್ಲಿ ಸಾಂಸ್ಕೃತಿಕ ವಾತಾವರಣ ಇಲ್ಲದೇ ಇರುವುದು ಕೂಡ ಈ ಜಿಡ್ಡುತನಕ್ಕೆ ಕಾರಣವಾಗುತ್ತಿದೆ’ ಎನ್ನುವ ಅಭಿಪ್ರಾಯಗಳು ಸಾರ್ವಜನಿಕರಿಂದ ವ್ಯಕ್ತವಾದವು.
ಈಗಿನ ವಿದ್ಯಾರ್ಥಿಗಳು ಸದಾ ಒತ್ತಡದಲ್ಲಿಯೇ ಕಲಿಯುವಂತಾಗಿದೆ. ವಿದ್ಯಾರ್ಥಿ ಜೀವನದ ಪಠ್ಯ ಹಾಗೂ ಪಠ್ಯೇತರ ಎಲ್ಲ ಮಗ್ಗಲುಗಳನ್ನೂ ಅನುಭವಿಸಿ ಸಂಭ್ರಮಿಸಿ ಕಲಿಯುವ ಮೊದಲಿನ ಸ್ಥಿತಿಯನ್ನು ರೂಢಿಸಿಕೊಳ್ಳುವ ಅಗತ್ಯವಿದೆಅಲ್ಲಮಪ್ರಭು ಬೆಟ್ಟದೂರು ಸಾಹಿತಿ
ಯುವಜನೋತ್ಸವಗಳು ಯುವ ಸಮುದಾಯದ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ ಮತ್ತು ಅವರ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ಒದಗಿಸುತ್ತವೆ. ಮೊದಲ ಬಾರಿಗೆ ಯುವಜನೋತ್ಸವದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ತುಂಬಾ ಖುಷಿ ತಂದಿದೆರೇಷ್ಮಾ ಬೇಗಂ ವಡ್ಡಟ್ಟಿ ಯುವ ಜನೋತ್ಸವ ಕಥಾ ಸ್ಪರ್ಧೆಯ ವಿಜೇತೆ
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವಂತೆ ಮಾಡುವ ಇಚ್ಛಾಶಕ್ತಿ ಶಿಕ್ಷಕರಲ್ಲಿ ಇಲ್ಲ; ತೊಡಗಿಕೊಳ್ಳಬೇಕು ಎನ್ನುವ ಆಸಕ್ತಿ ವಿದ್ಯಾರ್ಥಿಗಳಲ್ಲಿಯೂ ಇಲ್ಲ. ಮಕ್ಕಳಲ್ಲಿ ಆಸಕ್ತಿ ತರುವಂತೆ ಮಾಡುವ ಕೆಲಸವನ್ನು ಎಲ್ಲ ಶಿಕ್ಷಕರು ಮಾಡಬೇಕಾಗಿದ್ದ ವಿಷಯದಲ್ಲಿ ಎಲ್ಲರೂ ಸೋತಿದ್ದೇವೆ. ಸಾಮಾಜಿಕ ತಾಣಗಳಲ್ಲಿ ಬರುತ್ತಿರುವ ರೀಲ್ಸ್ ಜನಪದ ಹೆಸರಿನಲ್ಲಿ ಬಳಕೆಯಾಗುತ್ತಿರುವ ಅಶ್ಲೀಲ ಪದಗಳು ಸಿನಿಮಾ ಗೀತೆಗಳು ಯುವಜನತೆ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಿದ್ದು ಅವರು ಇದೇ ಜಗತ್ತು ಎಂದು ಭಾವಿಸಿದ್ದಾರೆ. ಮೊಬೈಲ್ ರೀಲ್ಸ್ ನಮ್ಮ ಪ್ರಪಂಚ ಎನ್ನುವ ಮನೋಭಾವನೆಯಿದೆ. ಅಕಾಡೆಮಿಗಳು ಸಂಘಸಂಸ್ಥೆಗಳು ವೈಯಕ್ತಿಕವಾಗಿ ನಾವು ಕಲಾವಿದರು ಕಾರ್ಯಕ್ರಮಗಳನ್ನು ನಡೆಸಲು ಶಾಲಾ ಕಾಲೇಜುಗಳನ್ನು ಕೇಂದ್ರವಾಗಿಟ್ಟುಕೊಳ್ಳಬೇಕು. ವಿದ್ಯಾಕೇಂದ್ರವನ್ನು ಪ್ರಮುಖವಾಗಿಸಿ ತಿಂಗಳ ಜಾನಪದ ಕಾರ್ಯಕ್ರಮ ನಡೆಸಲು ತರಬೇತಿ ಆಯೋಜನೆ ಬಗ್ಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಸಾಂಸ್ಕೃತಿಕ ಚಟುವಟಿಕೆಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಅವಕಾಶವಿದ್ದು ಇದನ್ನು ತಿಳಿಸಿಕೊಳ್ಳಬೇಕು. ಜೀವನಸಾಬ್ ಬಿನ್ನಾಳ ಜಾನಪದ ಅಕಾಡೆಮಿ ಸದಸ್ಯ
ಸಾಂಸ್ಕೃತಿಕ ಚಟುವಟಿಕೆಗಳು ಎಂದರೆ ಬೇಡ ಇದರಿಂದ ಏನೂ ಪ್ರಯೋಜನವಿಲ್ಲ ಎನ್ನುವ ಮನೋಭಾವನೆ ಮೂಡಿದೆ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಎಂಜಿನಿಯರಿಂಗ್ ವೈದ್ಯಕೀಯ ಹೀಗೆ ಕಠಿಣ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೂಡ ಆದ್ಯತೆ ಮೇರೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ನಮ್ಮವರು ಇದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಣ ಇಲಾಖೆಯ ಜವಾಬ್ದಾರಿಯೂ ಹೌದು. ವಿಠ್ಠಲ ಜಾಬಗೌಡರ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.