ಅಳವಂಡಿ: ಸಮೀಪದ ಕವಲೂರು - ಮುರ್ಲಾಪುರ - ಘಟ್ಟಿರಡ್ಡಿಹಾಳ ಮಾರ್ಗವಾಗಿ ಮುಂಡರಗಿ ನಗರಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಹಾಗಾಗಿ ಬಸ್ ಸಂಚಾರ ಸ್ಥಗಿತವಾಗಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳ ಜಿಲ್ಲೆಯ ಗಡಿ ಗ್ರಾಮಗಳಾದ ಕವಲೂರು, ಘಟ್ಟಿರಡ್ಡಿಹಾಳ ಹಾಗೂ ಮುರ್ಲಾಪುರ ಗ್ರಾಮದ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಗದಗ ಜಿಲ್ಲೆಯ ಮುಂಡರಗಿ ನಗರಕ್ಕೆ ಅಭ್ಯಾಸ ಮಾಡಲು ನಿತ್ಯ ತೆರಳುತ್ತಾರೆ.
ಮುಂಡರಗಿ ನಗರಕ್ಕೆ ತೆರಳಲು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕುಕನೂರು ಘಟಕದ ಬಸ್‌ಗಳು ಆಸರೆಯಾಗಿದೆ. ಆದರೆ ಕವಲೂರು, ಮುರ್ಲಾಪುರ, ಘಟ್ಟಿರಡ್ಡಿಹಾಳ ಗ್ರಾಮದ ರಸ್ತೆಗಳು ತೀರಾ ಹದಗೆಟ್ಟಿದ್ದು, ಆದ್ದರಿಂದ ಬಸ್ ಸಂಚಾರ ಬಂದ್ ಆಗಿದೆ. ಈ ರಸ್ತೆ ದುರಸ್ತಿ ಮಾಡಲು ಯಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಕವಲೂರು ಗ್ರಾಮದ ಮುತ್ತಣ್ಣ ಬಿಸರಳ್ಳಿ, ಘಟ್ಟಿರಡ್ಡಿಹಾಳ ಗ್ರಾಮದ ಹನುಮರೆಡ್ಡಿ ಗಿರಡ್ಡಿ ಮತ್ತಿತರರು ಆರೋಪಿಸಿದ್ದಾರೆ.
ಕುಕನೂರು ಘಟಕದ ಬಸ್‌ಗಳು ಮುಂಡರಗಿ, ಘಟ್ಟಿರಡ್ಡಿಹಾಳ, ಮುರ್ಲಾಪುರ ಹಾಗೂ ಕವಲೂರು ಮಾರ್ಗವಾಗಿ ಕುಕನೂರು ತಲುಪುತ್ತವೆ. ಗುರುವಾರದಿಂದ ಕುಕನೂರು ಘಟಕದ ಬಸ್ ಬಂದ್ ಆಗಿರುವುದರಿಂದ ಅನಿವಾರ್ಯವಾಗಿ ಖಾಸಗಿ ವಾಹನಗಳಿಗೆ ತೆರಳ ಬೇಕಾಗಿದೆ. ಇನ್ನೂ ಕವಲೂರು ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು ಅಳವಂಡಿ ಮಾರ್ಗವಾಗಿ ಮುಂಡರಗಿಗೆ ಬರಬೇಕಾಗಿದೆ.
ಈ ರಸ್ತೆಯುದ್ದಕ್ಕೂ ತಗ್ಗು- ದಿನ್ನೆಗಳು ಬಿದ್ದಿವೆ. ಅಲ್ಲಲ್ಲಿ ದೊಡ್ಡ ಹೊಂಡಗಳೇ ನಿರ್ಮಾಣವಾಗಿವೆ. ಇಲ್ಲಿ ಸಂಚರಿಸುವ ನೂರಾರು ವಾಹನ ಸವಾರರು, ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಯ ಮೇಲೆ ಬಿದ್ದ ಗುಂಡಿಗಳು. ರಸ್ತೆಯ ಮೇಲೆ ಜಲ್ಲಿ ಕಲ್ಲು ತೇಲಿ, ತಗ್ಗು ಬಿದ್ದಿವೆ. ಹೀಗಾಗಿ ಪ್ರಯಾಣಿಕರು ಹಗಲು ಹೊತ್ತಿನಲ್ಲೇ ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಹದೆಗೆಟ್ಟಿರುವದರಿಂದ ನಿಗದಿತ ವೇಳೆಯಲ್ಲಿ ಶಾಲಾ-ಕಾಲೇಜುಗಳಿಗೆ ತಲುಪದೇ ಶಿಕ್ಷಣ ಕುಂಠಿತಗೊಳ್ಳುತ್ತಿದೆ ಎನ್ನುವ ಅಳಲು ವಿದ್ಯಾರ್ಥಿಗಳದು.
‘ಬಸ್ ಬರದೇ ಇದ್ದರೆ ತೀವ್ರ ಹೋರಾಟ’: ಕವಲೂರು, ಘಟ್ಟಿರಡ್ಡಿಹಾಳ ಹಾಗೂ ಮುರ್ಲಾಪುರ ರಸ್ತೆಯನ್ನು ಅಭಿವೃದ್ಧಿಪಡಿಸಿ, ಬಸ್ ಸಂಚಾರಕ್ಕೆ ಅನುಕೂಲ ಮಾಡಬೇಕು. ಇಲ್ಲದಿದ್ದರೆ ಬೆಳಗಟ್ಟಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಬಂದ್‌ಗೊಳಿಸಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಇಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಸರಿ ಇಲ್ಲದ ಕಾರಣ ಬಸ್‌ಗಳು ಕೆಟ್ಟು ನಿಲ್ಲುತ್ತಿವೆ. ಸಂಚಾರ ಬಂದ್ ಮಾಡಲಾಗಿದೆ. ರಸ್ತೆ ಅಭಿವೃದ್ಧಿಯಾದ ಮೇಲೆ ಬಸ್ ಸಂಚಾರ ಪ್ರಾರಂಭಿಸಲಾಗುವುದು.ಸೋಮಶೇಖರ ಡಿಪೊ ವ್ಯವಸ್ಥಾಪಕರು ಕುಕನೂರು ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.