ADVERTISEMENT

ಸಿಎಂ, ಡಿಸಿಎಂ ಭೇಟಿ ಬಳಿಕ ಕಾಂಗ್ರೆಸ್ ಸೇರ್ಪಡೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 5:46 IST
Last Updated 16 ಏಪ್ರಿಲ್ 2024, 5:46 IST
<div class="paragraphs"><p>ಸಂಸದ ಸಂಗಣ್ಣ ಕರಡಿ</p></div>

ಸಂಸದ ಸಂಗಣ್ಣ ಕರಡಿ

   

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ಬುಧವಾರ (ನಾಳೆ) ಸಮಯ ನಿಗದಿಯಾಗಿದ್ದು ಅವರ ಭೇಟಿ ಬಳಿಕ‌ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ಳುವೆ ಎಂದು ಬಿಜೆಪಿ ಸಂಸದ ಸಂಗಣ್ಣ ಕರಡಿ ಹೇಳಿದರು‌.

ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಿಎಂ ಹಾಗೂ ಡಿಸಿಎಂ ಭೇಟಿಗೆ ನನ್ನ ಆತ್ಮೀಯ ಮಿತ್ರರೂ ಆದ ಶಾಸಕ ಲಕ್ಷ್ಮಣ ಸವದಿ ವ್ಯವಸ್ಥೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಕೂಡ ಮಾತನಾಡಿದ್ದು, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಸಿಎಂ, ಡಿಸಿಎಂ ಜೊತೆ ಚರ್ಚಿಸಿ ನಾನೂ ನನ್ನ ನಿರ್ಣಯ ಹೇಳುತ್ತೇನೆ. ನನ್ನ ಬೇಡಿಕೆ ಎನೆಂಬುದನ್ನು ನಿಮ್ಮ ಮುಂದೆ ಹೇಳುವುದಿಲ್ಲ ಎಂದರು.

ADVERTISEMENT

ಜನಾರ್ದನ ರೆಡ್ಡಿ ಅವರನ್ನು ಹೊರತುಪಡಿಸಿ ಬಿಜೆಪಿಯ ಯಾವ ನಾಯಕರೂ ಸಂಪರ್ಕದಲ್ಲಿ ಇಲ್ಲ. ಕಾಂಗ್ರೆಸ್ ಸೇರ್ಪಡೆ ತೀರ್ಮಾನದ ಬಳಿಕ ಯಾರೆಲ್ಲ ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುವೆ ಎಂದು ಹೇಳಿದರು.

ಭೇಟಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಂಗಳವಾರ ಸಂಸದ ಸಂಗಣ್ಣ ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಾಜಶೇಖರ ಹಿಟ್ನಾಳ 'ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ಸಂಗಣ್ಣ ಕರಡಿ ಅವರು ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಅವರು ಪಕ್ಷ ಸೇರಿದರೆ ದೊಡ್ಡ ಬಲ ಬರಲಿದೆ' ಎಂದರು.

ಸಂಗಣ್ಣ ನನಗೆ ತಂದೆ ಸಮಾನರು. ರಾಜ್ಯ ನಾಯಕರ ಜೊತೆ ಚರ್ಚಿಸಿ ಕಾಂಗ್ರೆಸ್ ಸೇರುವ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ಸೋಮವಾರ ರಾತ್ರಿ ಲಕ್ಷ್ಮಣ ಸವದಿ ಕೂಡ ಸಂಗಣ್ಣ ಅವರ ಮನೆಗೆ ಭೇಟಿ ನೀಡಿ ಒಂದು ತಾಸಿಗೂ ಹೆಚ್ಚುಹೊತ್ತು ಸಮಾಲೋಚನೆ ನಡೆಸಿದ್ದರು. ರಾತ್ರಿ ಒಟ್ಟಿಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಸಂಗಣ್ಣ ಮತ್ತು ಸವದಿ ಕಾಂಗ್ರೆಸ್ ಸೇರ್ಪಡೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.