ಅಳವಂಡಿ: ಲಂಬಾಣಿ ಸಮುದಾಯದವರು ಪ್ರತಿಯೊಂದು ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಆಧುನಿಕತೆಗೆ ಸಿಲುಕಿ ಬದಲಾದ ಜೀವನಶೈಲಿಯಲ್ಲಿ ಲಂಬಾಣಿ ಸಮುದಾಯದವರು ಮಾತ್ರ ಮೂಲ ಸಂಪ್ರದಾಯ ಬಿಟ್ಟುಕೊಟ್ಟಿಲ್ಲ. ಬೆಳಕಿನ ಹಬ್ಬ ದೀಪಾವಳಿ ಅವರ ಪಾಲಿಗೆ ಸಂಬಂಧಗಳನ್ನು ಬೆಸೆಯಲು ವೇದಿಕೆ.
ಈ ಸಮುದಾಯ ಶ್ರೀಮಂತ ಸಂಸ್ಕೃತಿ, ಪರಂಪರೆ ಹೊಂದುವ ಮೂಲಕ ವಿಶಿಷ್ಟ ವೇಷಭೂಷಣಗಳ ಜೊತೆಗೆ ಆಚರಣೆಗಳ ಪರಂಪರೆಯನ್ನೂ ಮೊದಲಿನಿಂದ ರೂಢಿಸಿಕೊಂಡು ಬಂದಿದೆ. ದೀಪಾವಳಿ ಹಬ್ಬವನ್ನು ಲಂಬಾಣಿ ಸಮುದಾಯದವರು ವೈವಿಧ್ಯಮಯ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಲಂಬಾಣಿ ಭಾಷೆಯಲ್ಲಿ ದೀಪಾವಳಿ ಹಬ್ಬಕ್ಕೆ ‘ಮೇರಾ’ ಎನ್ನುತ್ತಾರೆ.
ಈ ಹಬ್ಬ ಬಂತೆಂದರೆ ಸಾಕು, ಲಂಬಾಣಿ ಸಮುದಾಯದವರ ಪ್ರತಿ ತಾಂಡಾದಲ್ಲೂ ಎಲ್ಲಿಲ್ಲದ ಸಂಭ್ರಮ. ಬಹುತೇಕ ಈ ಸಮಾಜದವರು ತಮ್ಮ ಕುಟುಂಬದ ನಿರ್ವಹಣೆಗಾಗಿ ಬೇರೆ ಕಡೆ ದುಡಿಯಲು ವಲಸೆ ಹೋಗಿರುತ್ತಾರೆ. ಆದರೆ ದೀಪಾವಳಿ ಹಬ್ಬಕ್ಕೆ ವಲಸೆ ಹೋದವರು ತಮ್ಮ ತಾಂಡಾಗಳಿಗೆ ವಾಪಸ್ ಬರುತ್ತಾರೆ.
ದೀಪಾವಳಿ ಹಬ್ಬದಲ್ಲಿ ಯುವತಿಯರ ಪಾತ್ರ ಮಹತ್ವದ್ದಾಗಿದೆ. ಹಳೆಯ ಪದ್ಧತಿ ಹಾಗೂ ಸಂಸ್ಕೃತಿಯನ್ನು ಹೊಂದಿರುವ ವೇಷಭೂಷಣಗಳನ್ನು ತೊಟ್ಟು ಲಂಬಾಣಿ ಭಾಷೆಯ ಹಾಡಿನೊಂದಿಗೆ ನೃತ್ಯವನ್ನು ಮಾಡುತ್ತ ಆನಂದಿಸುವ ಯುವತಿಯರ ತಂಡಕ್ಕೆ ಇದು ಖುಷಿ ತರುವ ಹಬ್ಬ.
ದೀಪಾವಳಿಯಲ್ಲಿ ಲಕ್ಷ್ಮಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ, ಈ ಸಮುದಾಯದಲ್ಲಿ ತಮ್ಮ ಕುಟುಂಬದ ಹಿರಿಯನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಾರೆ. ದೀಪಾವಳಿ ಪಾಡ್ಯದಿನದಂದು ಬೆಳಿಗ್ಗೆ ಪ್ರತಿಯೊಬ್ಬರ ಮನೆ ಎದುರು ಸಗಣಿಯಿಂದ ಬೂದಗಳನ್ನು ತಯಾರಿಸಿ ಇಡುತ್ತಾರೆ. ಅವಿವಾಹಿತ ಯುವತಿಯರು ಕಾಡುಗಳಿಗೆ ತೆರಳಿ ಹೂವುಗಳನ್ನು ತಂದು ಗೋಧನ ಪೂಜೆ ಮಾಡುತ್ತಾರೆ.
ಮದುವೆ ನಿಶ್ಚಯವಾಗಿರುವ ಯುವತಿಯರು ತಮ್ಮ ಆಪ್ತ ಸ್ನೇಹಿತೆಯರನ್ನು ತಬ್ಬಿಕೊಂಡು ಅಳುವುದು ಈ ಜನಾಂಗದ ಸಂಪ್ರದಾಯ. ತಾನು ಬೆಳೆದ ವಾತಾವರಣ, ಸಂಸ್ಕೃತಿ, ಬಾಲ್ಯದ ನೆನಪು, ಅಲ್ಲಿನ ಬಾಲ್ಯದ ಗೆಳತಿಯರು, ತಂದೆ, ತಾಯಿ, ಹಿರಿಯರನ್ನು ಬಿಟ್ಟು ಹೋಗಬೇಕಲ್ಲ ಎನ್ನುವ ದುಃಖ ತಮ್ಮ ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುತ್ತಾರೆ ಎಂದು ಈ ಸಮುದಾಯದ ಹಿರಿಯರು ಹೇಳುತ್ತಾರೆ.
ಪ್ರತಿಯೊಂದು ಮನೆಮನೆಗೆ ತೆರಳಿ ದನದ ಕೊಟ್ಟಿಗೆಯಲ್ಲಿ ಸಗಣಿ ಕುಪ್ಪಿಗಳನ್ನು ಸಿದ್ಧಪಡಿಸಿ ಅವುಗಳಿಗೆ ಯುವತಿಯರು ಸಂಗ್ರಹಿಸಿ ತಂದ ಅಲಂಕಾರಿಕ ಹೂವುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಗೋವರ್ಧನ ಪೂಜೆ ಎನ್ನುತ್ತಾರೆ.
ಪ್ರತಿ ಮನೆಯಲ್ಲೂ ಮಜ್ಜಿಗೆ, ಹಿಟ್ಟು ಕಲಿಸಿ ಗೋವರ್ಧನ ಪೂಜೆ ಸಲ್ಲಿಸಿದ ನಂತರ ಹಾಕುತ್ತಾರೆ. ಕಾಲಕ್ಕೆ ತಕ್ಕಂತೆ ವೇಷಭೂಷಣಗಳು ಕೂಡ ಬದಲಾಗುತ್ತಿವೆ. ಬಂಜಾರ ಸಮುದಾಯದ ಯುವತಿಯರು ಹಳೆಯ ಪದ್ಧತಿಯ ವೇಷಭೂಷಣಗಳನ್ನು ತೊಟ್ಟು ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂಸ್ಕೃತಿಯ ಹೆಗ್ಗುರುತು ಆಗಿದೆ.
ಪ್ರತಿಯೊಬ್ಬರೂ ಒಂದಾಗಿ ಹಬ್ಬ ಆಚರಣೆ ಮಾಡುವುದರಿಂದ ಒಗ್ಗಟ್ಟು ಪ್ರದರ್ಶನವಾಗುತ್ತದೆ. ಪುರಾತನ ಕಲೆ, ಸಂಸ್ಕೃತಿ, ಸಾಂಪ್ರದಾಯಗಳು ಮನಸ್ಸಿಗೆ ಖುಷಿಯಾಗುವುದರ ಜೊತೆಗೆ ಸಂಬಂಧಗಳು ಬೆಳೆಯುತ್ತವೆ ಎನ್ನುತ್ತಾರೆ ಹೈದರ್‌ನಗರ ಗ್ರಾಮದ ವಿರೂಪಾಕ್ಷಿ ಬಡಿಗೇರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.