ADVERTISEMENT

ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ

ವಾಲ್ಮೀಕಿ ನಿಗಮದ ಅವ್ಯವಹಾರ: 28ರಂದು ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 5:10 IST
Last Updated 27 ಜೂನ್ 2024, 5:10 IST
ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಪತ್ರಿಕಾಗೋಷ್ಠಿಯಲ್ಲಿ ಪ್ರಜಾವಾಣಿ ವರದಿ ಪ್ರದರ್ಶಿಸಿದರು
ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಪತ್ರಿಕಾಗೋಷ್ಠಿಯಲ್ಲಿ ಪ್ರಜಾವಾಣಿ ವರದಿ ಪ್ರದರ್ಶಿಸಿದರು   

ಕೊಪ್ಪಳ: ‘ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ₹187 ಕೋಟಿ ಸಂಶಯಾಸ್ಪದವಾಗಿ ಹಲವು ಖಾತೆಗಳಿಗೆ ವರ್ಗಾವಣೆಯಾಗಿದ್ದು, ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಆಗ್ರಹಿಸಿದರು.

‘ಚುನಾವಣೆ ನೀತಿ ಸಂಹಿತೆಯ ಅವಧಿಯಲ್ಲಿಯೇ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಈ ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಚಂದ್ರದಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರ ಮೌಖಿಕ ಆದೇಶದಂತೆಯೇ ಅವ್ಯವಹಾರ ನಡೆದಿದೆ ಎಂದು ನಮೂದಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅವ್ಯವಹಾರದ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗಳನ್ನು ಹೇಮಲತಾ ನಾಯಕ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು. 

ಆದ್ದರಿಂದ ಈ ಅವ್ಯವಹಾರವನ್ನು ಖಂಡಿಸಿ ಜುಲೈ 28ರಂದು ಜಿಲ್ಲಾಕೇಂದ್ರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಅಂದಾಜು ಹತ್ತು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವರ್ಗಾವಣೆಯಾದ ಎಲ್ಲ ಹಣವೂ ಹಣಕಾಸು ಇಲಾಖೆಯ ಗಮನಕ್ಕೆ ಬಾರದೆ ಇನ್ನೊಬ್ಬರ ಖಾತೆಗೆ ಹೋಗಲು ಸಾಧ್ಯವೇ ಇಲ್ಲ. ಹಣಕಾಸಿನ ಇಲಾಖೆ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಯೇ ಇದರ ಜವಾಬ್ದಾರಿ ಹೊರಬೇಕು. ರಾಜ್ಯದಲ್ಲಿ ಭ್ರಷ್ಟರಿಗೆ ರಕ್ಷಣೆ ಸಿಗುತ್ತಿದ್ದು, ಪರಿಶಿಷ್ಟ ಪಂಗಡದವರ ಶೋಷಣೆಗೆ ಕಾಂಗ್ರೆಸ್‌ ಹಾಗೂ ರಾಜ್ಯ ಸರ್ಕಾರ ಹೊಣೆಯಾಗಿದೆ ಎಂದು ಆರೋಪಿಸಿದರು.

ADVERTISEMENT

ಪಕ್ಷದ ಎಸ್‌.ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯ ತಾಳಿಕೇರಿ, ಸಮಾಜದ ಮುಖಂಡ ಸುರೇಶ ದೊಣ್ಣಿ, ಎಸ್‌.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ಮಾಧ್ಯಮ ವಕ್ತಾರ ಮಹೇಶ ಹಾದಿಮನಿ ಹಾಗೂ ಎಸ್‌.ಟಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ವೀರಭದ್ರಪ್ಪ ನಾಯಕ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.