ADVERTISEMENT

ಕೊಪ್ಪಳ: ಒಳ ಮೀಸಲಾತಿ ವರದಿ ಜಾರಿಗೆ ಒತ್ತಾಯ

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:07 IST
Last Updated 16 ಅಕ್ಟೋಬರ್ 2024, 14:07 IST
ಕೊಪ್ಪಳದಲ್ಲಿ ಬುಧವಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಅವರಿಗೆ ಮನವಿ ಸಲ್ಲಿಸಿದರು
ಕೊಪ್ಪಳದಲ್ಲಿ ಬುಧವಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಅವರಿಗೆ ಮನವಿ ಸಲ್ಲಿಸಿದರು   

ಕೊಪ್ಪಳ: ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತಿ ಹೆಚ್ಚು ಹಿಂದುಳಿದ ಜಾತಿಗಳ ಅಭಿವೃದ್ಧಿಯ ಉದ್ದೇಶದಿಂದಾಗಿ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು ಒಳಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದ್ದು, ರಾಜ್ಯ ಸರ್ಕಾರ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿಗಳು ಸಾಮಾಜಿಕವಾಗಿ ಏಕರೂಪಿಯಾಗಿಲ್ಲ ಎಂದು ಏಳು ಜನ ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ಹೇಳಿದೆ. ಅದರಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆದುಕೊಳ್ಳಬೇಕು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ತನ್ನ ಆರನೇ ಗ್ಯಾರಂಟಿಯಾಗಿ ಒಳಮೀಸಲಾತಿ ಕಲ್ಪಿಸಿಕೊಡುವುದಾಗಿ ಹೇಳಿತ್ತು. ಈ ಮಾತು ಉಳಿಸಿಕೊಳ್ಳಬೇಕು.ಒಳ ಮೀಸಲಾತಿ ಜಾರಿಯಾಗುವ ತನಕ ಬ್ಯಾಕ್‌ಲಾಗ್‌ ಮತ್ತು ಇತರೆ ನೇಮಕಾರಿಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಖಿಲ ಭಾರತ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಡಿ.ಹುಲ್ಲೇಶ ಬುದಗುಂಪ, ರಾಜ್ಯ ಸಂಘಟನಾ ಸಂಂಚಾಲಕ ಬಿ.ಹುಸೇನಪ್ಪ ಸ್ವಾಮಿ ಮಾದಿಗ, ಪ್ರಮುಖರಾದ ಹುಲುಗಪ್ಪ ಹಿರೇಮನಿ ಬೇವೂರು, ಶರಣಪ್ಪ ಕನಕಗಿರಿ, ಮೈಲಾರಪ್ಪ ವಕೀಲ, ಶಂಕರ ಸಿದ್ದಾಪುರ, ಗಂಗಾವತಿಯ ಎಸ್‌. ದುರಗಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಹೋರಾಟ ನಿರತರು ಜಿಲ್ಲಾಡಳಿತ ಭವನದ ಗೇಟ್ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸ್ವೀಕರಿಸಲು ಸಜ್ಜಾಗಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮನವಿ ಸ್ವೀಕರಿಸಲು ಬಂದರೂ ಖುದ್ದು ಜಿಲ್ಲಾಧಿಕಾರಿಯೇ ಬರಬೇಕು ಎಂದು ಸಂಘಟನೆಯವರು ಪಟ್ಟು ಹಿಡಿದು ಜಿಲ್ಲಾಡಳಿತ ಭವನದ ಪ್ರವೇಶದ್ವಾರದ ಬಳಿ ಬಂದು ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ನಲಿನ್ ಅತುಲ್‌ ಬಂದು ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.