ADVERTISEMENT

ಕೊಪ್ಪಳ | ಡೆಂಗಿ: ಸಾಮೂಹಿಕ ಜ್ವರದ ಮೇಲೆ ಕಣ್ಗಾವಲು

ಕಳೆದ ವರ್ಷಕ್ಕಿಂತಲೂ ಜಿಲ್ಲೆಯಲ್ಲಿ ಶೇ. 60ರಷ್ಟು ಹೆಚ್ಚು ಡೆಂಗಿ ಪ್ರಕರಣ ಬಯಲಿಗೆ

ಪ್ರಮೋದ
Published 4 ಜುಲೈ 2024, 6:09 IST
Last Updated 4 ಜುಲೈ 2024, 6:09 IST
ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನೀರಿನ ಪರೀಕ್ಷೆಯಲ್ಲಿ ತೊಡಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ
ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನೀರಿನ ಪರೀಕ್ಷೆಯಲ್ಲಿ ತೊಡಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ   

ಕೊಪ್ಪಳ: ವಾತಾವರಣದಲ್ಲಿನ ಬದಲಾವಣೆ ಮತ್ತು ಅಸ್ವಚ್ಛತೆಯ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಈ ಬಾರಿ ಶೇ. 60ರಷ್ಟು ಡೆಂಗಿ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿವೆ. ಆದ್ದರಿಂದ ಆರೋಗ್ಯ ಇಲಾಖೆ ಸಾಮೂಹಿಕ ಜ್ವರದಿಂದ ಬಳಲುತ್ತಿರುವ ಜನರ ಮೇಲೆ ಕಣ್ಗಾವಲು ಇರಿಸಿ ಪರೀಕ್ಷೆಗಳನ್ನು ನಡೆಸುತ್ತಿದೆ.

ಇದೇ ವರ್ಷದ ಜನವರಿಯಿಂದ ಜೂನ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ 1950 ಪರೀಕ್ಷೆಗಳನ್ನು ಮಾಡಿದ್ದು ಇದರಲ್ಲಿ 92 ಪ್ರಕರಗಳಲ್ಲಿ ಡೆಂಗಿ ಇರುವುದು ದೃಢಪಟ್ಟಿದೆ. ಮುಂಗಾರಿನ ಈ ಅವಧಿಯಲ್ಲಿ ಹಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಮಳೆಯಾಗಿದೆ. ಆಗ ಚರಂಡಿ, ತಿಪ್ಪೆಯಲ್ಲಿನ ಸೊಳ್ಳೆಗಳು ಹೆಚ್ಚಾಗಿ ಜನವಸತಿ ಪ್ರದೇಶದಲ್ಲಿ ಹಾರಾಡುತ್ತಿವೆ. ಮಳೆಗಾಲದ ಸಮಯವೂ ಆಗಿರುವ ಕಾರಣ ಒಂದೇ ಸ್ಥಳದಲ್ಲಿ ಅನೇಕ ದಿನಗಟ್ಟಲೆ ನೀರು ಸಂಗ್ರಹ ಮಾಡುತ್ತಿರುವುದು, ಅಸ್ವಚ್ಛತೆ ವಾತಾವರಣ ಪ್ರಕರಣ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪ್ರಕರಣಗಳ ಸಂಖ್ಯೆಯಲ್ಲಿ ಕೊಪ್ಪಳ ತಾಲ್ಲೂಕು ಮುಂಚೂಣಿಯಲ್ಲಿದ್ದು ಈ ತಾಲ್ಲೂಕಿನಲ್ಲಿ 37, ಯಲಬುರ್ಗಾ ತಾಲ್ಲೂಕಿನಲ್ಲಿ 30, ಗಂಗಾವತಿ ತಾಲ್ಲೂಕಿನಲ್ಲಿ 15 ಮತ್ತು ಕುಷ್ಟಗಿ ವ್ಯಾಪ್ತಿಯಲ್ಲಿ ಏಳು ಪ್ರಕರಣಗಳು ಬಯಲಿಗೆ ಬಂದಿದ್ದು, ಆರೋಗ್ಯ ಇಲಾಖೆ ಪರೀಕ್ಷೆಗಳನ್ನು ಹೆಚ್ಚು ಮಾಡಿದೆ.

ADVERTISEMENT

ವಿಪರೀತ ಜ್ವರದಿಂದ ಬಳಲುತ್ತಿರುವವರು ಮತ್ತು ಸಂಶಯಾಸ್ಪದ ಪ್ರಕರಣಗಳಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಒಂದೇ ಕಡೆ ಹೆಚ್ಚು ಜನರಿಗೆ ಜ್ವರ ಬಂದಿದ್ದರೆ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ. ರಕ್ತದ ಮಾದರಿ ಸಂಗ್ರಹಿಸಿ ಅವುಗಳನ್ನು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ ಬಳಿಕ ಪಾಸಿಟಿವ್‌ ಬಂದರಷ್ಟೇ ಅವುಗಳನ್ನು ಆರೋಗ್ಯ ಇಲಾಖೆ ಡೆಂಗಿ ದೃಢ ಎಂದು ವರದಿ ರವಾನೆ ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಂಡವರು ಕಡ್ಡಯಾವಾಗಿ ಮಾಹಿತಿ ನೀಡಬೇಕು ಎಂದು ಈಗಾಗಲೇ ಇಲಾಖೆ ಎಲ್ಲ ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಬಲ್ಲಮೂಲಗಳ ಮಾಹಿತಿ ಪ್ರಕಾರ ಖಾಸಗಿ ಆಸ್ಪತ್ರೆಯಲ್ಲಿಯೂ ಡೆಂಗಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ ಎಂದು ತಿಳಿದು ಬಂದಿದೆ.

ಡೆಂಗಿ ಹಾವಳಿ ಹೆಚ್ಚಾಗಿರುವ ಕಾರಣ ಈಗ ಸಂಗ್ರಹಿಸುತ್ತಿರುವ ರಕ್ತದ ಮಾದರಿಯಲ್ಲಿ ಡೆಂಗಿ, ಮಲೇರಿಯಾ, ಚಿಕುನ್‌ ಗುನ್ಯಾ ಪತ್ತೆ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಸಿಬ್ಬಂದಿ ಗ್ರಾಮೀಣ ಪ್ರದೇಶಗಳಲ್ಲಿ ರಕ್ತಸಂಗ್ರಹ ಮಾಡಿ ಕಳುಹಿಸಿದ ಮಾದರಿಗಳಿಗಿಂತ ಆಸ್ಪತ್ರೆಯಲ್ಲಿ ಬಂದು ರಕ್ತಪರೀಕ್ಷೆ ಮಾಡಿಸಿಕೊಂಡ ಪ್ರಕರಣಗಳಲ್ಲಿಯೇ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಬಂದಿವೆ.

ಡೆಂಗಿ ಪತ್ತೆಗೆ ಆರೋಗ್ಯ ಇಲಾಖೆಯಿಂದ ಲಾರಾ ಸರ್ವೆ ಆರು ತಿಂಗಳಲ್ಲಿ 92 ಪ್ರಕರಗಳು ದಾಖಲು ಕೊಪ್ಪಳ ತಾಲ್ಲೂಕು ಒಂದರಲ್ಲಿಯೇ 30 ಪ್ರಕರಣ ಬಯಲು
‘ನೀರು ಸಂಗ್ರಹಣೆ ಬಗ್ಗೆ ಎಚ್ಚರವಿರಲಿ’
ಕೊಪ್ಪಳ: ವಾರಗಟ್ಟಲೆ ನೀರು ಶೇಖರಣೆ ಮಾಡಿದಾಗ ಕೊಳಚೆ ನೀರು ಒಂದೇ ಕಡೆ ಸಂಗ್ರಹವಾದ ಸುತ್ತಮುತ್ತಲಿನ ಜನವಸತಿ ಪ್ರದೇಶದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಈ ಬಗ್ಗೆ ಜನ ಎಚ್ಚರಿಕೆ ವಹಿಸಬೇಕು ಎಂದು ಡಿಎಚ್‌ಒ ಡಾ. ಲಿಂಗರಾಜು ಟಿ. ಹೇಳಿದರು.   ‘ವಾತಾವರಣದ ಏರಿಳಿತ ಸೊಳ್ಳೆಗಳ ಉತ್ಪತ್ತಿ ಪ್ರಮಾಣ ಹೆಚ್ಚಿಸಿದೆ. ಸಂಜೆ ಸೊಳ್ಳೆಗಳು ಕಚ್ಚದ ಹಾಗೆ ನೋಡಿಕೊಳ್ಳಬೇಕು ನೀರು ನಿಲ್ಲದಂತೆ ಜಾಗೃತಿ ವಹಿಸಿ. ಹಲವು ಬಾರಿ ಜ್ವರದ ಡೆಂಗಿ ಲಕ್ಷಣಗಳನ್ನು ಹೊಂದಿದ್ದರು ಅನೇಕರಿಗೆ ರಕ್ತಪರೀಕ್ಷೆಯಲ್ಲಿ ಡೆಂಗಿ ಇರುವುದು ಖಚಿಪಟ್ಟಿರುವುದಿಲ್ಲ. ಇದಕ್ಕೂ ಡೆಂಗಿ ರೋಗಿಗೆ ನೀಡುವ ಚಿಕಿತ್ಸೆಯನ್ನೇ ಕೊಡಲಾಗುತ್ತದೆ. ಮೊದಲು ಡೆಂಗಿ ಪತ್ತೆಗೆ ಪ್ರತಿ ಲಾರಾ ಸರ್ವೆ ನಡೆಸಲಾಗುತ್ತಿದೆ’ ಎಂದರು.
ಶುಕ್ರವಾರ ಉತ್ಪತ್ತಿ ತಾಣ ನಾಶಮಾಡುವ ದಿನ
ರಾಜ್ಯದಾದ್ಯಂತ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನವೆಂದು ಘೋಷಣೆ ಮಾಡಿದೆ. ಈ ಕುರಿತು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದು ಶುಕ್ರವಾರ ಮನೆ ಶಾಲೆ ಕಾಲೇಜು ಅಂಗವನಾಡಿ ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಗಲಿನಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.